October 18, 2026
Sunday, October 18, 2026
spot_img

1,000 ಕೆಜಿ ಬೆಳ್ಳಿ ಈಗ ಇಟ್ಟಿಗೆ ರೂಪಕ್ಕೆ! ಲಕ್ಷಾಂತರ ರೂ. ವೆಚ್ಚದ ಹಿಂದಿರುವ ರಹಸ್ಯವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಯೋಧ್ಯೆ ರಾಮ ಮಂದಿರದ ದೇಣಿಗೆ ವಿಚಾರದಲ್ಲಿ ರಾಜಕೀಯ ಆರೋಪ-ಪ್ರತ್ಯಾರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ, ಭಕ್ತರು ಸಮರ್ಪಿಸಿದ್ದ ಟನ್‌ಗಟ್ಟಲೆ ಬೆಳ್ಳಿಯನ್ನು ಹೈದರಾಬಾದ್‌ಗೆ ಸಾಗಿಸಿರುವ ಸುದ್ದಿ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ. ಸುರಕ್ಷತೆಯ ದೃಷ್ಟಿಯಿಂದ ಕೈಗೊಂಡ ಈ ನಿರ್ಧಾರದ ಸಂಪೂರ್ಣ ವಿವರ ಈಗ ಹೊರಬಿದ್ದಿದೆ.

ಹೈದರಾಬಾದ್‌ಗೆ ಸಾಗಿದ್ದೇಕೆ 1 ಟನ್ ಬೆಳ್ಳಿ?

ಜಗತ್ತಿನಾದ್ಯಂತ ಇರುವ ರಾಮಭಕ್ತರು ಮಂದಿರಕ್ಕೆ ತಟ್ಟೆ, ಲೋಟ, ಒಡವೆ ಸೇರಿದಂತೆ ನಾನಾ ರೂಪಗಳಲ್ಲಿ ಬೆಳ್ಳಿ ವಸ್ತುಗಳನ್ನು ಕಾಣಿಕೆಯಾಗಿ ನೀಡಿದ್ದಾರೆ. ಇಂತಹ ಸಣ್ಣ-ಪುಟ್ಟ ಸಹಸ್ರಾರು ಆಭರಣಗಳನ್ನು ಸುರಕ್ಷಿತವಾಗಿಡುವುದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ದೊಡ್ಡ ಸವಾಲಾಗಿತ್ತು. ಈ ಕಾರಣಕ್ಕಾಗಿ, ಸುಮಾರು 1,000 ಕಿಲೋಗ್ರಾಂ (1 ಟನ್) ತೂಕದ ಈ ಎಲ್ಲಾ ವಸ್ತುಗಳನ್ನು ಕರಗಿಸಿ, ಒಂದೇ ಅಳತೆಯ ಇಟ್ಟಿಗೆಗಳನ್ನಾಗಿ ಮಾರ್ಪಡಿಸಲು ಟ್ರಸ್ಟ್ ನಿರ್ಧರಿಸಿತು.

ಸರ್ಕಾರಿ ಮುದ್ರಾ ಲಾಲಯದಲ್ಲಿ ಇಟ್ಟಿಗೆಗಳಾಗಿ ಪರಿವರ್ತನೆ

ಪಾರದರ್ಶಕತೆ ಕಾಯ್ದುಕೊಳ್ಳಲು ಟ್ರಸ್ಟ್ ಈ ಜವಾಬ್ದಾರಿಯನ್ನು ಹೈದರಾಬಾದ್‌ನಲ್ಲಿರುವ ಕೇಂದ್ರ ಸರ್ಕಾರದ ಸ್ವಾಮ್ಯದ ‘ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್’ (SPMCIL) ಸಂಸ್ಥೆಗೆ ವಹಿಸಿತ್ತು. ಅತ್ಯಂತ ಕಟ್ಟುನಿಟ್ಟಾದ ಶುದ್ಧತೆ (Purity) ಪರೀಕ್ಷೆಯ ನಂತರ, ಇಲ್ಲಿ ಬೆಳ್ಳಿಯನ್ನು ಅಧಿಕೃತ ಇಟ್ಟಿಗೆಗಳಾಗಿ ಪರಿವರ್ತಿಸಲಾಗಿದೆ.

ಲಕ್ಷಾಂತರ ರೂಪಾಯಿ ವೆಚ್ಚವಾಗಲು ಕಾರಣವೇನು?

ವರದಿಗಳ ಪ್ರಕಾರ, 1 ಟನ್‌ನಷ್ಟು ಭಾರೀ ಪ್ರಮಾಣದ ಬೆಳ್ಳಿಯನ್ನು ಅಯೋಧ್ಯೆಯಿಂದ ಹೈದರಾಬಾದ್‌ಗೆ ಸಾಗಿಸಲು ಮತ್ತು ಇಟ್ಟಿಗೆಯಾದ ಬಳಿಕ ಮರಳಿ ತರಲು ಕಠಿಣ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಈ ಹೈ-ಸೆಕ್ಯುರಿಟಿ ಸಾಗಣೆ ವೆಚ್ಚ ಹಾಗೂ ಸರ್ಕಾರಿ ಸಂಸ್ಥೆಗೆ ಪಾವತಿಸಿದ ತಾಂತ್ರಿಕ ಪ್ರಕ್ರಿಯೆಯ ಶುಲ್ಕದಿಂದಾಗಿ ಲಕ್ಷಾಂತರ ರೂಪಾಯಿ ವೆಚ್ಚವಾಗಿದೆ ಎಂದು ತಿಳಿದುಬಂದಿದೆ.

Must Read