ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾದ ಗಡಿಭಾಗದಲ್ಲಿ (India China border) ಭದ್ರತೆಯನ್ನು ಬಲಪಡಿಸಲು ಭಾರತೀಯ ಸೇನೆ ಬಹಳಷ್ಟು ಹೆಚ್ಚುವರಿ ಸೈನಿಕರ ಪ್ರಬಲ ಪಡೆಯನ್ನು ನಿಯೋಜಿಸಿದೆ.
ವರದಿಗಳ ಪ್ರಕಾರ 10,000 ಸೈನಿಕರ ದೊಡ್ಡ ಪಡೆಯೇ ಚೀನಾ ಗಡಿ ಕಾಯಲು ಹೋಗಿದೆ.
ಭಾರತ ಮತ್ತು ಚೀನಾ ನಡುವೆ ಸೂಕ್ಷ್ಮ ಎನಿಸಿರುವ ಗಡಿಭಾಗದಲ್ಲಿ ಇವರು ರಕ್ಷಣಾ ಕಾರ್ಯ ನೋಡಿಕೊಳ್ಳಲಿದ್ದಾರೆ. ಈಗಾಗಲೇ ಈ ಜಾಗಗಳಲ್ಲಿ 9,000 ಸೈನಿಕರಿದ್ದಾರೆ. ಈಗ ಒಟ್ಟಾರೆ ಹತ್ತಿರ ಹತ್ತಿರ 20,000 ಸೈನಿಕರ ಪ್ರಬಲ ಸೇನಾ ಪಡೆಯೇ ಭಾರತ ಚೀನಾ ಸೂಕ್ಷ್ಮ ಗಡಿಭಾಗಗಳಲ್ಲಿ ನಿಯೋಜನೆ ಆಗಲಿದೆ.
ಚೀನಾದ ಟೆಬೆಟ್ ಪ್ರಾಂತ್ಯ ಮತ್ತು ಭಾರತದ ಉತ್ತರಾಖಂಡ್, ಹಿಮಾಚಲಪ್ರದೇಶವನ್ನು ಪ್ರತ್ಯೇಕಿಸುವ ಗಡಿಭಾಗದಲ್ಲಿ ಈ ಸೈನಿಕರ ಪಹರೆ ಇರಲಿದೆ .
2020ರಲ್ಲಿ ಲಡಾಖ್ ಗಡಿಭಾಗದ ಗಾಲ್ವನ್ ಗಣಿವೆಯಲ್ಲಿ ಚೀನೀ ಅತಿಕ್ರಮಣ ತಡೆಯಲು ಭಾರತೀಯ ಸೈನಿಕರು ಯತ್ನಿಸಿದ್ದರು. ಆಗ ಎರಡೂ ಕಡೆ ತೀವ್ರ ಸಂಘರ್ಷವಾಗಿ 20ಕ್ಕೂ ಹೆಚ್ಚು ಭಾರತೀಯ ಸೈನಿಕರು ಬಲಿಯಾಗಿದ್ದರು.ಆ ಘಟನೆಗಳ ಬಳಿಕ ಭಾರತೀಯ ಸರ್ಕಾರ ಮತ್ತು ಸೇನೆ ಹೆಚ್ಚು ಜಾಗೃತಗೊಂಡು, ಗಡಿಭಾಗದಲ್ಲಿ ಮೂಲಸೌಕರ್ಯ ಹೆಚ್ಚಿಸುತ್ತಿವೆ. ಕ್ಷಿಪಣಿಗಳು, ಯುದ್ಧವಿಮಾನಗಳನ್ನು ಆಯಕಟ್ಟಿನ ಜಾಗದಲ್ಲಿ ನೆಲೆಗೊಳಿಸಲಾಗಿದೆ. ಬಹಳಷ್ಟು ಸೇನಾ ಪಡೆಗಳನ್ನು ಗಡಿಭಾಗದ ಸಮೀಪ ನಿಯೋಜಿಸಲಾಗಿದೆ.
ಸದಾ ಕಾಲ ಯುದ್ಧಕ್ಕೆ ಸಿದ್ದವಿದ್ದೇ ಇರಬೇಕು
ಸದ್ಯ ಯಾವ ಯುದ್ಧ ಸಾಧ್ಯತೆ ಇಲ್ಲ ಎಂದು ನೆಮ್ಮದಿಯಾಗಿ ಇರುವಂತಿಲ್ಲ. ಭಾರತ ಸದಾ ಕಾಲ ಯುದ್ಧಕ್ಕೆ ಸಿದ್ದವಿದ್ದೇ ಇರಬೇಕು. ಶಾಂತಿಕಾಲದಲ್ಲೂ ಯುದ್ಧಕ್ಕೆ ಸನ್ನದ್ಧ ಸ್ಥಿತಿಯಲ್ಲಿರಬೇಕು ಎಂದು ಇದೇ ವೇಳೆ ರಾಜನಾಥ್ ಸಿಂಗ್ ಹೇಳಿದ್ದಾರೆ.
ನೆಲದಿಂದಲೇ ಆಗಲೀ, ಆಗಸದಿಂದಲೇ ಆಗಲೀ, ಅಥವಾ ಸಮುದ್ರದಿಂದಲೇ ಆಗಲೀ ಯಾರಾದರೂ ದಾಳಿ ಮಾಡಿದರೆ ನಮ್ಮ ಪಡೆಗಳು ಸರಿಯಾಗಿಯೇ ಉತ್ತರಿಸುತ್ತವೆ. ನಾವು ಯಾವ ದೇಶದ ಮೇಲೂ ಆಕ್ರಮಣ ಮಾಡಿಲ್ಲ. ಅಥವಾ ಯಾರದೇ ನೆಲವನ್ನೂ ಕಬಳಿಸಿಲ್ಲ. ಆದರೆ, ನಮ್ಮ ಮೇಲೆ ಯಾರಾದರೂ ದಾಳಿ ಮಾಡಿದರೆ ಅದಕ್ಕೆ ತಕ್ಕ ಪ್ರತ್ಯುತ್ತರ ನೀಡಬಲ್ಲ ಸಾಮರ್ಥ್ಯ ಹೊಂದಿದ್ದೇವೆ,’ ಎಂದು ಗುಡುಗಿದ್ದಾರೆ.
ಕಳೆದ 10 ವರ್ಷದಲ್ಲಿ ಭಾರತದ ಪ್ರಭಾವ ಎಷ್ಟು ಗಾಢವಾಗಿದೆ ಎಂಬುದಕ್ಕೆ ರಾಜನಾಥ್ ಸಿಂಗ್ ಒಂದು ನಿದರ್ಶನ ನೀಡಿದ್ದಾರೆ. ತಾನು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲೂ ಸಚಿವನಾಗಿದ್ದೆ. ಈಗಲೂ ಸಚಿವನಾಗಿದ್ದೇನೆ. ಆಗ ತಾನು ಬೇರೆ ದೇಶಗಳಿಗೆ ಹೋಗಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಮಾತನಾಡಿದಾಗ ನಮ್ಮ ಮಾತನ್ನು ಗಂಭೀರವಾಗಿ ಪರಿಗಣಿಸಲಾಗುತ್ತಿರಲಿಲ್ಲ. ಈಗ ನಾವು ಆ ವೇದಿಕೆಗಳಲ್ಲಿ ಮಾತನಾಡಿದರೆ ಇಡೀ ವಿಶ್ವ ಆಲಿಸುತ್ತದೆ. ಈ ರೀತಿ ನಮ್ಮ ಪ್ರಭಾವ ಬೆಳೆದಿದೆ ಎಂದು ಗುರುವಾರ ಅವರು ತಿಳಿಸಿದ್ದಾರೆ.