ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ 104 ಶಾಲೆಗಳನ್ನು ಡ್ರಗ್ಸ್ ಹಾಟ್‌ಸ್ಪಾಟ್ ಎಂದು ಗುರುತಿಸಲಾಗಿದೆ. ಇದು ಪೋಷಕರನ್ನು ಆತಂಕಕ್ಕೆ ದೂಡಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹೆದರುತ್ತಿದ್ದಾರೆ.
ಕೇರಳ ರಾಜ್ಯದ ಅಬಕಾರಿ ಇಲಾಖೆಯು 104 ಶಾಲೆಗಳನ್ನು ಮಾದಕ ವಸ್ತುಗಳ ತಾಣಗಳೆಂದು ಗುರುತಿಸಿದೆ ಮತ್ತು ವಿದ್ಯಾರ್ಥಿಗಳ ಮೇಲೆ ಮಾದಕ ವಸ್ತುಗಳ ಆಗುತ್ತಿರುವ ಪ್ರಭಾವಗಳನ್ನು ತಡೆಗಟ್ಟಲು ಪ್ರಯತ್ನಿಸುತ್ತಿದೆ. ಈ ಶಾಲೆಗಳ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ದುರುಪಯೋಗ ವ್ಯಾಪಕವಾಗಿ ಕಂಡುಬಂದ ನಂತರ ಶಿಕ್ಷಣ ಇಲಾಖೆಯು ಶಾಲೆಗಳನ್ನು ಮಾದಕ ವಸ್ತುಗಳ ತಾಣಗಳೆಂದು ಗುರುತಿಸಿದೆ. ಪ್ರೌಢಶಾಲೆ ವಿಭಾಗಗಳಲ್ಲಿ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳು ಪಟ್ಟಿಯಲ್ಲಿವೆ.
ಕೇರಳದ ತಿರುವನಂತಪುರ ಜಿಲ್ಲೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ, ಜಿಲ್ಲೆಯ 43 ಶಾಲೆಗಳು ಇದರಲ್ಲಿ ಸೇರಿವೆ, ನಂತರ ಎರ್ನಾಕುಲಂ ಮತ್ತು ಕೋಳಿಕೋಡ್ ಜಿಲ್ಲೆಗಳ ಶಾಲೆಗಳು ಸ್ಥಾನ ಹೊಂದಿವೆ ಎಂದು ಅಬಕಾರಿ ಇಲಾಖೆಯ ಮೂಲಗಳು ತಿಳಿಸಿವೆ.
ಹಾಟ್‌ಸ್ಪಾಟ್ ಶಾಲೆಗಳನ್ನು ಅಬಕಾರಿ ಕಣ್ಗಾವಲಿನಲ್ಲಿ ಇರಿಸಲಾಗುವುದು ಮತ್ತು ಅಗತ್ಯವಿದ್ದರೆ ಪೊಲೀಸರ ಸಹಾಯವನ್ನು ಪಡೆಯಲಾಗುವುದು. ಮಾದಕ ವಸ್ತುಗಳ ಗೀಳಿಗೆ ಸಿಲುಕಿರುವ ವಿದ್ಯಾರ್ಥಿಗಳನ್ನು ಮಾದಕ ವಸ್ತುಗಳ ದಂಧೆಯಿಂದ ಮುಕ್ತಗೊಳಿಸಲು ನಿರ್ದಿಷ್ಟ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರ ಅಬಕಾರಿ ಇಲಾಖೆಗೆ ಸೂಚನೆ ನೀಡಿದೆ ಎಂದು ಬಹು ಮೂಲಗಳು ತಿಳಿಸಿವೆ.