ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿನ್ನಸ್ವಾಮಿ ಕಾಲ್ತುಳಿತ ಪ್ರಕರಣ ಸಂಬಂಧ ಸಿಐಡಿ ಬಹುತೇಕ ತನಿಖೆ ಮುಗಿಸಿದ್ದು, ವಿರಾಟ್ ಕೊಹ್ಲಿಗಾಗಿ ಆರ್‌ಸಿಬಿ ಮ್ಯಾನೇಜ್‌ಮೆಂಟ್ ತೆಗೆದುಕೊಂಡ ಆತುರದ ನಿರ್ಧಾರವೇ 11 ಜನರ ಸಾವಿಗೆ ಕಾರಣ ಎಂದು ವರದಿ ಸಿದ್ಧಪಡಿಸಿದೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಉಂಟಾದ ಕಾಲ್ತುಳಿತ ಪ್ರಕರಣ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೂರು ಎಫ್‌ಐಆರ್‌ಗಳ ಬಗ್ಗೆ ತನಿಖೆ ನಡೆಸಿದ್ದ ಸಿಐಡಿ ಕಾಲ್ತುಳಿತಕ್ಕೆ ಕಾರಣವಾದ ಅಂಶಗಳನ್ನ ಪತ್ತೆ ಮಾಡಿದೆ.
ಸಾವಿರಾರು ವಿಡಿಯೋಗಳು, ಸಿಸಿಟಿವಿ ಕ್ಯಾಮೆರಾ, ಚಿನ್ನಸ್ವಾಮಿ ಸ್ಟೇಡಿಯಂನ 13 ಗೇಟ್‌ಗಳಲ್ಲಿ ಅವ್ಯವಸ್ಥೆ, ಪೊಲೀಸರ ನಿಯೋಜನೆ, ನೂಕುನುಗ್ಗಲು ಉಂಟಾಗಲು ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸಿ, ಸಿಐಡಿ ವರದಿ ಸಿದ್ಧಪಡಿಸಿದೆ.
ಆರ್‌ಸಿಬಿ ಸಿಇಓ ರಾಜೇಶ್ ಮೆನನ್, ಮಾರ್ಕೆಟಿಂಗ್ ಹೆಡ್ ನಿಖಿಲ್ ಸೋಸಲೆಯಿಂದ ಕಾರ್ಯಕ್ರಮ ಆಯೋಜನೆ ನಿರ್ಧಾರ ಮಾಡಲಾಗಿತ್ತು. ವಿರಾಟ್ ಕೊಹ್ಲಿಯ ಕಾರಣ ಕೊಟ್ಟು ಕೊಹ್ಲಿ ಆಪ್ತ ನಿಖಿಲ್ ಸೋಸ್ಲೆ ಕೆಎಸ್‌ಸಿಎ ಮೇಲೆ ಅತಿಯಾದ ಒತ್ತಡ ಹಾಕಿ ಕಾರ್ಯಕ್ರಮ ಆಯೋಜಿಸಿದ್ದರು.
ಕಾರ್ಯಕ್ರಮ ಮುಂದೂಡಿಕೆ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಕೆಎಸ್‌ಸಿಎ ಅಭಿಪ್ರಾಯ ನೀಡಿತ್ತು. ಆದರೆ ಕೊಹ್ಲಿ ಕಾರಣ ಹೇಳಿ ನಾಳೆಯೇ ಕಾರ್ಯಕ್ರಮ ಆಯೋಜನೆ ಆಗಬೇಕು ಎಂದು ನಿಖಿಲ್ ಸೋಸಲೆ ಒತ್ತಡ ಹಾಕಿದ್ದರು. ಕೊಹ್ಲಿ ಯುಕೆಗೆ ಹೋಗಬೇಕು. ಮುಂದೂಡಿದರೆ ಕೊಹ್ಲಿ ಬರುವುದಿಲ್ಲ ಎಂದಿದ್ದರು. ನಿಖಿಲ್ ಸೋಸಲೆ ಒತ್ತಡಕ್ಕೆ ಕಾರ್ಯಕ್ರಮ ಆಯೋಜನೆ ನಡೆದಿತ್ತು ಎನ್ನಲಾಗಿದೆ.