ರಾಜಧಾನಿ ಬೆಂಗಳೂರಿನಲ್ಲಿ 11 ಮಿ.ಮೀ ಮಳೆ : ಎಲ್ಲೆಡೆ ಸಂಚಾರ ಅಸ್ತವ್ಯಸ್ತ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೋಮವಾರ ಸಂಜೆ 5.30 ರವರೆಗೆ 11 ಮಿ.ಮೀ ಮಳೆಯಾಗಿದ್ದು, ವರುಣನ ಆರ್ಭಟದಿಂದ ಹಲವೆಡೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಇಂದು ಕೂಡ ಮಳೆ ಮುಂದುವರಿದಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 4.2 ಮಿ.ಮೀ ಮಳೆಯಾಗಿದೆ. ಭಾರತ ಹವಾಮಾನ ಇಲಾಖೆ (ಐಎಂಡಿ) ನೀಡಿರುವ ಮಾಹಿತಿಗಳ ಪ್ರಕಾರ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ದಲ್ಲಿ 19.8 ಮಿ.ಮೀ ಮಳೆ ದಾಖಲಾಗಿದ್ದು, ಜಕ್ಕೂರಿನಲ್ಲಿ 17 ಮಿ.ಮೀ, ವಿದ್ಯಾರಣ್ಯಪುರದಲ್ಲಿ 15 ಮಿ.ಮೀ, ಬಾಣಸವಾಡಿಯಲ್ಲಿ 11.50 ಮಿ.ಮೀ, ಎಚ್‌ಎಎಲ್ ಹಳೆಯ ವಿಮಾನ ನಿಲ್ದಾಣದಲ್ಲಿ 11 ಮಿ.ಮೀ ಮತ್ತು ಹೊರಮಾವು 11 ಮಿ.ಮೀ ಮಳೆಯಾಗಿದೆ ಎಂದು ತಿಳಿದುಬಂದಿದೆ.

ಸಂಜೆ ವೇಳೆ ಸುರಿದ ಭಾರೀ ಮಳೆಯಿಂದಾಗಿ, ಹಲವಾರು ಪ್ರದೇಶಗಳಲ್ಲಿ ನೀರು ನಿಂತು ಸಂಚಾರಕ್ಕೆ ತೀವ್ರ ತೊಂದರೆಯಾಯಿತು, ಇದರಿಂದಾಗಿ ವಾಹನಗಳು ನಿಧಾನವಾಗಿ ಚಲಿಸಿದವು. ಸಂಚಾರ ದಟ್ಟಣೆಯಿಂದಾಗಿ ನಗರಾದ್ಯಂತ ವಿದ್ಯಾರ್ಥಿಗಳು, ಮನೆಗೆ ಹೋಗುವವರು ತೀವ್ರ ಸಮಸ್ಯೆ ಎದುರಿಸಿದರು.

ಹಲವು ಅಂಡರ್‌ಪಾಸ್‌ಗಳಲ್ಲಿ ನೀರು ನಿಂತ ಪರಣಾಮ ವಾಹನ ಸಂಚಾರ ನಿಧಾನವಾಯಿತು. ತೀವ್ರ ಸಂಚಾರ ಅಡಚಣೆ ಉಂಟಾದ ಪ್ರದೇಶಗಳಿಗೆ ಬೆಂಗಳೂರು ಸಂಚಾರ ಪೊಲೀಸರು (ಬಿಟಿಪಿ) ಹಲವಾರು ಸಲಹೆಗಳನ್ನು ನೀಡಿದರು.

ಸಿಲ್ಕ್ ಬೋರ್ಡ್ ಜಂಕ್ಷನ್, ಗುಂಜೂರು ರಸ್ತೆ, ವರ್ತೂರು, ಮಾರತಹಳ್ಳಿ ಸೇತುವೆ, ಬೆಳ್ಳಂದೂರು, ಐಟಿಪಿಎಲ್ ಮುಖ್ಯ ರಸ್ತೆ, ಆಡುಗೋಡಿ ಜಂಕ್ಷನ್, ರೂಪೇನ ಅಗ್ರಹಾರ, ಬೊಮ್ಮನಹಳ್ಳಿ, ಪಾಣತ್ತೂರು ಜಂಕ್ಷನ್, ಹೆಣ್ಣೂರಿನ ಕೆಇಬಿ ಜಂಕ್ಷನ್, ಕೊತ್ತನೂರು ಮುಖ್ಯ ರಸ್ತೆ ಮತ್ತು ಡೈರಿ ವೃತ್ತದ ಸಾಗರ್ ಮೆಟ್ರೋ ನಿಲ್ದಾಣದ ಬಳಿ ತೀವ್ರ ಸಂಚಾರ ದಟ್ಟಣೆ ಸಮಸ್ಯೆ ಕಂಡು ಬಂದಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!