ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾದ ಗನ್ಸುಕಿಂಗ್ಹೈ ಗಡಿ ಪ್ರದೇಶದಲ್ಲಿ ಭಾರೀ ಭೂಕಂಪ ಸಂಭವಿಸಿದ್ದು, 111 ಮಂದಿ ಮೃತಪಟ್ಟಿದ್ದಾರೆ.
ಭೂಕಂಪದ ತೀವ್ರತೆ 6.1ರಷ್ಟಿತ್ತು ಎಂದು ಯುರೋಪಿಯನ್ ಮೆಡಿಟೇನಿಯನ್ ಭೂಕಂಪನ ಕೇಂದ್ರ ಮಾಹಿತಿ ನೀಡಿದೆ. ಗನ್ಸು ಪ್ರಾಂತ್ಯದ ರಾಜಧಾನಿ ಲಾನ್ಝೌ ಬಳಿ 35 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ.
ಭೂಕಂಪನದಲ್ಲಿ ಗಾಯಗೊಂಡವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ, 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಬಗ್ಗೆ ಮಾಹಿತಿ ದೊರಕಿದೆ, ಆದರೆ ಸ್ಪಷ್ಟ ಮಾಹಿತಿ ಇಲ್ಲ. ಗಾಯಗೊಂಡವರ ಹಾಗೂ ಮೃತಪಟ್ಟವರ ಸಂಖ್ಯೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯ ಬಿರುಸಿನಿಂದ ಸಾಗುತ್ತಿದೆ. ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ರಕ್ಷಣಾ ಕಾರ್ಯಗಳು, ಜನರ ಸುರಕ್ಷತೆ ಖಾತರಿಗೆ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.
ಇಷ್ಟೇ ಅಲ್ಲದೇ ಚೀನಾದ ವಾತಾವರಣವೂ ಶೀತಮಯವಾಗಿದೆ, -14 ಡಿಗ್ರಿ ಸೆಲ್ಶಿಯಸ್ ಇರುವ ಕಾರಣ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಂದರೆಗಳಾಗುತ್ತಿವೆ. ನೀರು, ವಿದ್ಯುತ್, ಇಂಟರ್ನೆಟ್, ನೆಟ್ವರ್ಕ್, ಸಾರಿಗೆ ಸಂಪರ್ಕಕ್ಕೆ ಹಾನಿಯಾಗಿದೆ.