ಹೊಸದಿಗಂತ ಡಿಜಿಟಲ್ ಡೆಸ್ಕ್:
ವೇಗವಾಗಿ ಬಂದ ಟ್ರಕ್ಕೊಂದು ನಿಂತಿದ್ದ ಮೂರು ಬಸ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ 12 ಮಂದಿ ಸಾವನ್ನಪ್ಪಿದ್ದು, 39 ಮಂದಿ ಗಾಯಗೊಂಡಿರುವ ಭಯಾನಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇವರಲ್ಲಿ ಹತ್ತು ಮಂದಿ ಸ್ಥಿತಿ ಚಿಂತಾಜನಕವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸಾರ್ವಜನಿಕ ಸಭೆ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ರೇವಾ ಮತ್ತು ಸಿದ್ದಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಸಿದ್ದಿ ಜಿಲ್ಲೆಯ ಮೊಹಾನಿಯಾ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದೆ. ಅಪಘಾತದ ವಿಷಯ ತಿಳಿದ ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಸ್ಥಿತಿಗತಿ ವಿಚಾರಿಸಿ ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಸತ್ನಾದಲ್ಲಿ ಶಬರಿ ಜಯಂತಿ ನಿಮಿತ್ತ ಕೇಂದ್ರ ಸಚಿವ ಅಮಿತ್ ಶಾ ಹಾಗೂ ಮಧ್ಯಪ್ರದೇಶ ಸಿಎಂ ಪರಿಶಿಷ್ಟ ಪಂಗಡಗಳ ಕೋಲ್ ಮಹಾಕುಂಭದಲ್ಲಿ ಪಾಲ್ಗೊಂಡಿದ್ದರು. ಈ ಬೃಹತ್ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ್ದ ಜನರು ಸಂಜೆ 5 ಗಂಟೆಗೆ ಬಸ್‌ಗಳ ಮೂಲಕ ಸಿದ್ದಿಗೆ ತೆರಳಿದರು. ಮೊಹಾನಿಯಾದಲ್ಲಿ ಚಹಾ ಮತ್ತು ತಿಂಡಿಗಾಗಿ ಬಸ್ಸುಗಳನ್ನು ರಸ್ತೆಬದಿಯಲ್ಲಿ ನಿಲ್ಲಿಸಲಾಗುತ್ತದೆ. ಬಸ್ಸಿನಲ್ಲಿ ಪ್ರಯಾಣಿಕರಿಗೆ ಉಪಾಹಾರವನ್ನು ನೀಡುವ ವೇಳೆ ವೇಗವಾಗಿ ಬಂದ ಟ್ರಕ್ ಹಿಂದಿನಿಂದ ಬಸ್‌ಗಳಿಗೆ ಡಿಕ್ಕಿ ಹೊಡೆದಿದೆ. ಇದರಿಂದ ಮುಂಭಾಗದಲ್ಲಿದ್ದ ಬಸ್ ಪಕ್ಕದ ಕಾಲುವೆಗೆ ಬಿದ್ದಿದೆ. ಬಸ್ಸಿನಲ್ಲಿದ್ದವರು ಬಸ್ಸಿನ ಕೆಳಗೆ ಬಿದ್ದಿದ್ದರಿಂದ ಮೃತರ ಸಂಖ್ಯೆ ಮತ್ತು ಗಾಯಗೊಂಡವರ ಸಂಖ್ಯೆ ಅಪಾರವಾಗಿದೆ.
ಅಪಘಾತದ ವೇಳೆ ಎಂಟು ಜನರು ಸಾವನ್ನಪ್ಪಿದ್ದರೆ, 4 ಮಂದಿ ರೇವಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಸಾವನ್ನಪ್ಪಿದಾರೆ. ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಇನ್ನೂ 39 ಜನರಿಗೆ ವೈದ್ಯಕೀಯ ಸೇವೆಗಳನ್ನು ಒದಗಿಸಲಾಗುತ್ತಿದೆ. ಇವರಲ್ಲಿ ಹತ್ತು ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ರೇವಾದ ಸಂಜಯ್ ಗಾಂಧಿ ಆಸ್ಪತ್ರೆಗೆ ಸಿಎಂ ಶಿವರಾಜ್ ಚೌಹಾಣ್ ತೆರಳಿದರು ಗಾಯಾಳುಗಳನ್ನು ಭೇಟಿ ಮಾಡಿ ಅವರ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು. ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ರೂ. 10 ಲಕ್ಷ ಮತ್ತು ಗಂಭೀರ ಪರಿಸ್ಥಿತಿ ಇರುವವರಿಗೆ 2 ಲಕ್ಷರೂ ಹಾಗೂ ಸಣ್ಣಪುಟ್ಟ ಗಾಯಗೊಂಡವರಿಗೆ 1ರೂ ಲಕ್ಷ ಪರಿಹಾರ ನೀಡುವುದಾಗಿ ಸಿಎಂ ಘೋಷಿಸಿದರು.