ಹೊಸದಿಗಂತ ವರದಿ ಮಸ್ಕಿ:
ತಾಲೂಕಿನ ವಟಗಲ್ ಗ್ರಾಮದಲ್ಲಿ 12ನೇ ಶತಮಾನದ ಮೂರು ಶಾಸನಗಳು ಪತ್ತೆಯಾಗಿವೆ. ಗ್ರಾಮದ ಆಂಜನೇಯ ದೇವಸ್ಥಾನದಲ್ಲಿ ಎರಡು ಮತ್ತು ಈಶ್ವರ ದೇವಸ್ಥಾನದ ಆವರಣದಲ್ಲಿ ಒಂದು ಶಾಸನ ಪತ್ತೆಯಾಗಿವೆ. ಎರಡು ಕಪ್ಪು ಶಿಲಾ ಶಾಸನಗಳಲ್ಲಿ ಒಂದು ಏಳು ಹೆಡೆ ನಾಗ ಶಿಲ್ಪದ ಪಕ್ಕದಲ್ಲಿದ್ದು 23 ಸಾಲುಗಳಿಂದ ರಚಿತವಾಗಿದೆ.
ಕ್ರಿ.ಶ.12ನೇ (1184-1198) ಕಲ್ಯಾಣ ಚಾಲುಕ್ಯ ಶತಮಾನದ ಅರಸ ನಾಲ್ಕನೇ ಸೋಮೇಶ್ವರನ ರಾಜ್ಯಭಾರದಲ್ಲಿ ಮಹಾ ಮಂಡಳೇಶ್ವರನಾಗಿ ವಟಗಲ್ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಹೊಲ್ಲರಸನು ಆಳ್ವಿಕೆ ಮಾಡುತ್ತಿದ್ದ ಎನ್ನುವ ಮಾಹಿತಿ ಇದೆ ಎಂದು ಸಂಶೋಧಕ ಡಾ. ಚನ್ನಬಸ್ಸಪ್ಪ ಮಲ್ಕಂದಿನ್ನಿ ಹೇಳಿದರು.
ಶಾಸನದ ಆರಂಭದಲ್ಲಿ ‘ವೊಟ್ಟುಗಲ್ಲು’ ಎನ್ನುವ ಮಾಹಿತಿ ಇದ್ದು ನಾಗವರ್ಮ ಅರಸ ಮತ್ತು ನಾಗರಸ ಎನ್ನುವವರ ಹೆಸರು ಉಲ್ಲೇಖವಾಗಿದೆ. ಎರಡನೇ ಶಾಸನದಲ್ಲಿ ಸೂರ್ಯ, ಚಂದ್ರ, ನಂದಿ, ಕಾಳಾಮುಖಮುನಿ ಮತ್ತು ಖಡ್ಗದ ಶಿಲ್ಪಗಳಿದ್ದು, ಕಲ್ಯಾಣ ಚಾಲುಕ್ಯ ಅರಸ ಆರನೇ ವಿಕ್ರಮಾಧಿತ್ಯನ ಹೆಸರು ಕಂಡು ಬರುತ್ತದೆ. ಕ್ರಿ.ಶ. 18-19ನೇ ಶತಮಾನದ ಮೂರನೇ ಶಾಸನದಲ್ಲಿ ಮೊರಟ ಎನ್ನುವ ಅಕ್ಷರವಿದ್ದು, ಅದು ಸಿರವಾರ ತಾಲೂಕಿನ ಮಲ್ಲಟ ಗ್ರಾಮ ಎಂದು ತಿಳಿಯುತ್ತದೆ ಎಂದು ವಿವರಿಸಿದರು.
ಉಪನ್ಯಾಸಕರಾದ ಚನ್ನಪ್ಪ, ವಸ್ತ್ರದ್, ಅಯ್ಯಪ್ಪ, ಗ್ರಾಮದ ವೆಂಕನಗೌಡ ಪಾಟೀಲ್, ಬಲವಂತರಾಯ, ಅಮರೇಶ ಬಡಿಗೇರ, ತಿಮ್ಮಣ್ಣ ಕಾಚಾಪುರ ಅವರು ಶಾಸನ ಪತ್ತೆ ಸಂದರ್ಭದಲ್ಲಿ ಸಹಕರಿಸಿದ್ದಾರೆ ಎಂದು ಅವರು ಹೇಳಿದರು.