ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಗಾಲ್ಯಾಂಡ್‌ನ ಮೊನ್ ಜಿಲ್ಲೆಯ ಟಿರು ಮತ್ತು ಒಟಿಂಗ್ ಗ್ರಾಮಗಳ ಬಳಿ ಎರಡು ವರ್ಷದ ಹಿಂದೆ 13 ಮಂದಿ ನಾಗರಿಕರನ್ನು ಹತ್ಯೆ ಮಾಡಲಾಗಿತ್ತು.
ಈ ಪ್ರಕರಣದಲ್ಲಿ ಆರೋಪಿಗಳಾಗಿರುವ 30 ಸೈನಿಕರನ್ನು ವಿಚಾರಣೆಗೆ ಒಳಪಡಿಸಲು ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿದೆ.
ಅಪರಾಧ ವಿಭಾಗದ ಪೊಲೀಸರು ಮತ್ತು ವಿಶೇಷ ತನಿಖಾ ತಂಡ ಈ ಪ್ರಕರಣದ ತನಿಖೆ ನಡೆಸಿ, ಮೊನ್ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಆರೋಪಿಗಳ ವಿರುದ್ಧ ಕ್ರಮ ಜರುಗಿಸಲು ರಕ್ಷಣಾ ಸಚಿವಾಲಯದ ಸೇನಾ ವ್ಯವಹಾರಗಳ ಇಲಾಖೆಯ ಅನುಮತಿ ಕೋರಲಾಗಿತ್ತು. ಆದರೆ ಆರೋಪಿಗಳ ವಿರುದ್ಧದ ಕಾನೂನು ಕ್ರಮಕ್ಕೆ ಸೇನಾ ವ್ಯವಹಾರಗಳ ಇಲಾಖೆಯು ಅನುಮತಿ ನಿರಾಕರಿಸಿದೆ.
2021ರಲ್ಲಿ ಟಿರು ಗ್ರಾಮದ ಬಳಿ ಇದ್ದ ಕಲ್ಲಿದ್ದಲು ಗಣಿಯಿಂದ ಕೆಲಸ ಮುಗಿಸಿ ಬರುವ ಗ್ರಾಮಸ್ಥರ ಮೇಲೆ ಸೈನಿಕರು ಗುಂಡು ಹಾರಿಸಿದ್ದರು. ಆರು ಕೂಲಿ ಕಾರ್ಮಿಕರು ಹತರಾಗಿದ್ದರು. ಇವರ ಶವಗಳನ್ನು ಗ್ರಾಮಕ್ಕೆ ಕೊಂಡೊಯ್ಯುವಾಗ ಭದ್ರತಾ ಸಿಬ್ಬಂದಿ ಮತ್ತು ಗ್ರಾಮಸ್ಥರ ನಡುವೆ ಘರ್ಷಣೆ ನಡೆದು ಮತ್ತೆ ಏಳು ನಾಗರಿಕರನ್ನು ಭದ್ರತಾ ಪಡೆ ಸಿಬ್ಬಂದಿ ಗುಂಡಿಟ್ಟು ಕೊಂದಿದ್ದರು.