ಯುಗಪುರುಷ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ 130 ವರ್ಷ!

– ನಿತೀಶ ಡಂಬಳ

ಆತ ಎಲ್ಲರಂತೆ ಸಾಮಾನ್ಯ ಸನ್ಯಾಸಿ ಅಲ್ಲ. ಕಾವಿ ತೊಟ್ಟು ದೇವರ ನಾಮಸ್ಮರಣೆ ಮಾಡಿಲ್ಲ. ನಮ್ಮನ್ನು ಕೀಳಾಗಿ ನೋಡುತ್ತಿದ್ದ, ಪಾಶ್ಚಿಮಾತ್ಯ ದೇಶಗಳಿಗೆ ಹೋಗಿ ಭಾರತದ ಸಂಸ್ಕøತಿಯನ್ನು ಉತ್ತುಂಗಕ್ಕೆ ಏರಿಸಿದ ವೀರ ಸನ್ಯಾಸಿ, ರಾಷ್ಟ್ರಸಂತ, ಯುಗಪುರುಷ ಸ್ವಾಮಿ ವಿವೇಕನಾಂದರನ್ನು ಸ್ಮರಿಸಲಬೇಕಾದ ದಿನವಿದು.

1893ರಲ್ಲಿ ಅಮೇರಿಕಾದಲ್ಲಿ ವಿಶ್ವಧರ್ಮ ಸಮ್ಮೇಳನ ಆಯೋಜಿಸಬೇಕೆಂದು ಸಕಲ ಸಿದ್ಧತೆಗಳು ನಡೆದಿದ್ದವು. ಜಗತ್ತಿನಾದ್ಯಂತ ಇರುವ ಎಲ್ಲ ಧರ್ಮದ ಪ್ರತಿನಿಧಿಗಳಿಗೆ ಆಮಂತ್ರಣವನ್ನು ಕಳಿಸಲಾಗಿತ್ತು. ಆಗ ಭಾರತದಲ್ಲಿ ಬಹಳ ಕ್ರಿಯಾಶೀಲವಾಗಿದ್ದ ಆರ್ಯ ಸಮಾಜ, ಬ್ರಹ್ಮ ಸಮಾಜಕ್ಕೂ ಸಹ ಆಮಂತ್ರಣ ದೊರೆಯಿತು. ಸ್ವಾಮಿ ವಿವೇಕಾನಂದರು ಇದರ ಬಗ್ಗೆ ಮೊದಲು ಅಷ್ಟು ಗಂಭೀರವಾಗಿ ಯೋಚಿಸಿದ್ದಿಲ್ಲ. ಆದರೆ ಗುರುಗಳಾದ ರಾಮಕೃಷ್ಣ ಪರಮಹಂಸರ ಆದೇಶದ ಮೇರೆಗೆ ವಿವೇಕಾನಂದರು ಸರ್ವಧರ್ಮ ಸಮ್ಮೇಳನಕ್ಕೆ ಹೋಗಲು ನಿಶ್ಚಯಿಸಿದರು. ಇನ್ನೂ ಅಲ್ಲಿಗೆ ತೆರಳಲು ಹಣದ ಅವಶ್ಯಕತೆಯೂ ಇತ್ತು. ಅನೇಕ ಸಿರಿವಂತರು ಹಾಗೂ ಶಿಷ್ಯವೃಂದದ ಸಹಾಯದಿಂದ ಕೊಂಚ ಹಣದ ಸಂಗ್ರಹವೂ ಆಯಿತು. ಆದರೆ ಅದೇನು ದೊಡ್ಡ ಮೊತ್ತವಲ್ಲ. ಇನ್ನೂ ಪಶ್ವಿಮ ದಿಕ್ಕಿಗೆ ಪಯಣ ಆರಂಭಿಸಿದರು. ಹಡಗಿನಲ್ಲಿ ಒಂದುವರೆ ತಿಂಗಳು ಪರ್ಯಟಿಸಿದ ನಂತರ ಕೆನಡಾ ಪ್ರಾಂತ್ಯಕ್ಕೆ ತಲುಪಿದರು.

ಅಲ್ಲಿಗೆ ತಲುಪುವುದರೊಳಗೆ ಅವರಿಗೊಂದು ಅಚ್ಚರಿಯ ಸುದ್ದಿ ಕಾದಿತ್ತು. ಅದೆನೆಂದರೆ ಸರ್ವಧರ್ಮ ಸಮ್ಮೇಳನಕ್ಕೆ ಇನ್ನೂ ಒಂದು ತಿಂಗಳು ಮುಂಚೆಯೇ ಅಲ್ಲಿ ಹೋಗಿದ್ದರು. ಚಿಕಾಗೋ ಮೊದಲೇ ದುಬಾರಿ ನಗರ, ಅಲ್ಲಿದ್ದರೇ ಬಹುಬೇಗ ಹಣದ ಗಂಟು ಖರ್ಚಾಗುತ್ತೆಂದು ಡರ್ಬನಗೆ ತೆರಳಿದರು. ಗುರುತು ಪರಿಚಯ ಇಲ್ಲದ ಜನ, ಊರು. ಎಲ್ಲಿ ತಂಗಬೇಕೆಂಬುದರೆ ಬಗ್ಗೆ ಯೋಚಿಸುತ್ತಿದ್ದರು. ಉಳಿದುಕೊಳ್ಳಲು ಸ್ಥಳ ಸಿಗದಿದ್ದಾಗ ರೇಲ್ವೆ ನಿಲ್ದಾಣದಲ್ಲಿ ಮಲಗಿದರು. ಮೈಕೊರೆವ ಚಳಿ, ಹಸಿವಿನ ಬಾಧೆ, ಜೊತೆಗೆ ಕೆಲವೊಮ್ಮೆ ಅವಮಾನ. ವಿದೇಶಿಯವರು ಇವರ ಕಾವಿ ಪೋಷಾಕು ಕಂಡು ಭಿಕ್ಷುಕನಂತೆ ನೋಡಿದರು. ವಿವೇಕಾನಂದರು ಅಕ್ಷರಶಃ ಕಷ್ಟವನ್ನು ಎದುರಿಸಿದರು. ಕೊನೆಗೆ ವಿದೇಶಿ ಮಹಿಳೆಯೊಬ್ಬಳು ಇವರಿಗೆ ಆಶ್ರಯ ನೀಡಿದಳು. ವಿಶ್ವಧರ್ಮ ಸಮ್ಮೇಳನದಲ್ಲಿ ಭಾಗವಹಿಸಲು ಲೆಟರ್ ಆಫ್ ಕ್ರೆಡೆಯನ್ಷಿಯಲ್ (ಪರಿಚಯ ಪತ್ರ) ಅನಿವಾರ್ಯವಾಗಿತ್ತು. ಆದರೆ ಅಲ್ಲಿ ಇವರಿಗೆ ಗುರುತು ಪರಿಚಯವಿದ್ದವರು ಯಾರು ಇರಲಿಲ್ಲ. ಕೊನೆಗೆ ಪ್ರೊಫೆಸರ್ ರೈಟ್ ಅವರಿಂದ ಪರಿಚಯ ಪತ್ರ ಲಭ್ಯವಾಯಿತು.

ಅದು 1893ರ ಸೆಪ್ಟೆಂಬರ್ 11, ಸೋಮವಾರ ಅಮೇರಿಕಾದ ಚಿಕ್ಯಾಗೋ ನಗರದಲ್ಲಿ ವಿಶ್ವಧರ್ಮ ಸಮ್ಮೇಳನ ಆಯೋಜಿಸಲಾಗಿತ್ತು. ಆಗಿನ ಕಾಲಕ್ಕೆ ಇದೊಂದು ವಿಶ್ವ ಮಟ್ಟದಲ್ಲಿ ಜರುಗಿದ ಮಹಾನ್ ವಿದ್ವಾಂಸರ ಸಮ್ಮೇಳನ. ಜಗತ್ತಿನಾದ್ಯಂತ ಇರುವ ಎಲ್ಲ ಧರ್ಮದ ಪ್ರತಿನಿಧಿಗಳು ಅಲ್ಲಿ ಭಾಗವಹಿಸಿದ್ದರು. ಸುಮಾರು ಏಳು ಸಹಸ್ರಕ್ಕೂ ಅಧಿಕ ಪ್ರೇಕ್ಷಕರು ಸೇರಿದ್ದರು. ಈಗಿನ ಕಾಲದಂತೆ ಆಗ ಯಾವ ಧ್ವನಿವರ್ಧಕ ಯಂತ್ರಗಳು ಇರಲಿಲ್ಲ. ಎಲ್ಲರೂ ಶಾಂತಚಿತ್ತದಿಂದ ಉಪನ್ಯಾಸಗಳನ್ನು ಕೇಳುತ್ತಿದ್ದರು. ವಿವೇಕಾನಂದರಿಗೆ ಉಳಿದ ಧರ್ಮಗಳ ಬಗ್ಗೆಯೂ ಸಹ ಅರಿತಿದ್ದರು. ಕಾರ್ಯಕ್ರಮದ ಉದ್ಘೋಷಕರು ಬಂದು ಮುಂದಿನ ಭಾಷಣ ನಿಮ್ಮದೇ ಎಂದು ವಿವೇಕಾನಂದರಿಗೆ ತಿಳಿಸಿದರು. ಸ್ವಾಮೀಜಿ ಕೊಂಚ ವಿಚಲಿತರಾದರು. ತಮ್ಮ ಭಾಷಣವನ್ನು ಮುಂದೂಡಲು ಕೇಳಿಕೊಂಡರು. ಹೀಗೆ ಕೆಲ ಬಾರಿ ಮುಂದೂಡಿ, ಮಧ್ಯಾಹ್ನದ ಹೊತ್ತಿಗೆ ಅವರ ಭಾಷಣದ ಸಮಯ ಬಂದೇ ಬಿಟ್ಟಿತು.

ಸ್ವಾಮಿಜಿ ನೆರೆದಿದ್ದ ಸಭಿಕರನ್ನು ನೋಡಿ ಅಂಜಿದರು. ಈ ರೀತಿ ಹಿಂದೆಂದೂ ಆಗಿರಲಿಲ್ಲ. ಯಾವುದೇ ಪುಸ್ತಕ ನೋಡಿ ಅವರು ಮಾತನಾಡಲಿಲ್ಲ, ಯಾವ ರೀತಿಯ ತಯಾರಿಯೂ ಸಹ ಇರಲಿಲ್ಲ. ಮನದಲ್ಲೇ ಗುರುಗಳನ್ನು ಸ್ಮರಿಸಿದರು. “ಸಿಸ್ಟರ್ಸ್ ಆ್ಯಂಡ್ ಬ್ರದರ್ಸ ಆರ್ಫ ಅಮೇರಿಕಾ” ಎಂದು ಹೇಳುವುದೆ ತಡ ನೆರೆದ ಸಭಿಕರಿಂದ ಕಿವಿ ಕಿವುಡಾಗುವಷ್ಟು ಕರತಾಡನದ ನಾದ ಕೇಳಿಸಿತು. ಸುಮಾರು ಎರಡುವರೆ ನಿಮಿಷಗಳ ಕಾಲ ಕರತಾಡನ ಹಾಗೆ ಗುಯ್‍ಗುಡುತಿತ್ತು. ವಿಶ್ವಮಟ್ಟದಲ್ಲಿ ಭಾರತದ ಸಂಸ್ಕೃತಿ, ಪರಂಪರೆ, ಹಿರಿಮೆಯನ್ನು ಎತ್ತಿ ಹಿಡಿದರು. ಭಾರತೀಯರ ಬಗ್ಗೆ ಪಾಶ್ಚಿಮಾತ್ಯರಲ್ಲಿ ಇದ್ದ ಮನೋಭಾವ ಇವರಿಂದ ಬದಲಾಯಿತು. ಇದೊಂದು ಪರಿವರ್ತನೆಯ ಭಾಷಣವಾಗಿತ್ತು. ಸ್ವಾಮಿಜಿ ಕೇವಲ ಮಾತನಾಡಿದ್ದು ಹತ್ತು ನಿಮಿಷ. ಈ ಕಿರು ಭಾಷಣದಲ್ಲಿ ಭಾರತದ ಹಿರಿಮೆಯನ್ನು ಸಾರುವುದರ ಜೊತೆಗೆ ಎಲ್ಲ ಧರ್ಮಗಳು ಸಮಾನವಾದದ್ದು ಎಂದು ಪ್ರತಿಪಾದಿಸಿದರು. ಮುಂದೆ ಸೆಪ್ಟೆಂಬರ್ 20, 26, 27 ರಂದು ಒಟ್ಟು ನಾಲ್ಕು ಬಾರಿ ಸರ್ವಧರ್ಮ ಸಮ್ಮೇಳನದಲ್ಲಿ ಭಾಷಣ ಮಾಡಿದರು. ಆಗಲೇ ಅವರ ಪ್ರಸಿದ್ಧಿ ಎಲ್ಲೆಡೆ ಹಬ್ಬಿದ್ದರಿಂದ ಜನ ಅವರ ಭಾಷಣ ಕೇಳಲು ಕಾತುರತೆಯಿಂದ ಕಾಯುತ್ತಿದ್ದರು. ಅಲ್ಲಿನ ಪತ್ರಿಕೆಗಳು ಅವರ ವ್ಯಕ್ತಿತ್ವ, ಭಾಷಣಗಳ ಬಗ್ಗೆ ಕೊಂಡಾಡಿದವು.

ಅನೇಕ ಶ್ರೀಮಂತರು ವಿವೇಕಾನಂದರನ್ನು ತಮ್ಮ ಮನೆಗಳಿಗೆ ಆಹ್ವಾನಿಸಿದರು. ವಿವೇಕಾನಂದರೊಂದಿಗೆ ಮಾತನಾಡುವುದು ಎಂದರೆ ಎಲ್ಲರಿಗೂ ಖುಷಿ ಮತ್ತು ಶ್ರೇಷ್ಠತೆಯ ವಿಷಯವಾಗಿತ್ತು. ಹೀಗೆ ಕೇವಲ ತಮ್ಮ ಐದು ಪದಗಳ ಮೂಲಕ ಸ್ವಾಮಿ ವಿವೇಕಾನಂದರು ಜಗತ್ತಿನ ಚಿತ್ತವನ್ನು ಭಾರತದತ್ತ ತಿರುಗಿಸಿದರು. ಇಂದು ಆ ಭಾಷಣಕ್ಕೆ 130 ವರ್ಷ. ಈ ದಿನವನ್ನು ನಾಡಿನೆಲ್ಲೆಡೆ ದಿಗ್ವಿಜಯ ದಿವಸವೆಂದು ಆಚರಿಸಿ ಸ್ವಾಮಿ ವಿವೇಕಾನಂದರು ಹಾಗೂ ಅವರ ಭಾಷಣವನ್ನು ಸ್ಮರಿಸಿಕೊಳ್ಳಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!