ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಸ್ರೇಲ್ ಮೇಲೆ ಹಮಾಸ್ ದಾಳಿಯಲ್ಲಿ ಕನಿಷ್ಠ 14 ಅಮೆರಿಕನ್ನರು ಮೃತಪಟ್ಟಿದ್ದು, ಈ ದಾಳಿ ದುಷ್ಟತನದಿಂದ ಕೂಡಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯಹೂದಿಗಳನ್ನು ಕೊಲ್ಲುವ ಉದ್ದೇಶದಿಂದ ಭಯೋತ್ಪಾದಕಾ ಸಂಘಟನೆ ಹಮಾಸ್ ಈ ದಾಳಿ ನಡೆಸಿದೆ. ದಾಳಿಯಲ್ಲಿ ಸಾವಿರಕ್ಕೂ ಹೆಚ್ಚು ಅಮಾಯಕ ನಾಗರಿಕರು ಪ್ರಾಣ ಬಿಟ್ಟಿದ್ದಾರೆ ಎಂದಿದ್ದಾರೆ.
ಶಾಂತಿಗಾಗಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದ ಮೇಲೆ ದಾಳಿ ನಡೆಸಿ ಇಡೀ ಭೂಮಿಯನ್ನೇ ರಕ್ತಸಿಕ್ತ ಮಾಡಿದ್ದಾರೆ. ಘಟನೆಯಲ್ಲಿ ಎಷ್ಟೋ ತಾಯಂದಿರು ತಮ್ಮ ಮಕ್ಕಳನ್ನು ರಕ್ಷಿಸಲು ತಾವೇ ಪ್ರಾಣಬಿಟ್ಟಿದ್ದಾರೆ. ಮಕ್ಕಳು, ಹೆಂಗಸರು, ವಯಸ್ಸಾದವರು ಎಲ್ಲರೂ ದಾಳಿಯಲ್ಲಿ ಮೃತಪಟ್ಟಿದ್ದಾರೆ.
ಇಸ್ರೇಲ್ ಜೊತೆಗೆ ನಾವಿದ್ದೇವೆ, ಬೆಂಜಮಿನ್ ನೆತನ್ಯಾಹು ಅವರ ಜೊತೆ ದೂರವಾಣಿ ಕರೆ ಮಾಡಿ ಮಾತನಾಡಿದ್ದೇನೆ, ಇಸ್ರೇಲ್‌ಗೆ ನೆರವಾಗಲು ಮಿಲಿಟರಿ ನೆರವು ನೀಡಲಾಗಿದೆ ಎಂದಿದ್ದಾರೆ. ಅಮೆರಿಕದಲ್ಲಿ ಯಹೂದಿ ಕೇಂದ್ರಗಳ ಸುತ್ತ ಭದ್ರತೆ ಹೆಚ್ಚು ಮಾಡಿದ್ದೇವೆ, ನಮ್ಮ ದೇಶದಲ್ಲಿರುವ ಇಸ್ರೇಲಿಗಳ ರಕ್ಷಣೆ ಮಾಡುತ್ತೇವೆ, ಅವರ ಸುರಕ್ಷತೆಗೆ ಕ್ರಮ ಕೈಗೊಂಡಿದ್ದೇವೆ, ನಮ್ಮ ದೇಶದಲ್ಲಿ ದ್ವೇಷಕ್ಕೆ ಜಾಗವಿಲ್ಲ ಎಂದಿದ್ದಾರೆ.