ಹೊಸದಿಗಂತ ಮಂಡ್ಯ :
ಸರ್ಕಾರಿ ಕೆಲಸ ಕೊಡಿಸುವುದಾಗಿ ನಕಲಿ ದಾಖಲಾತಿಗಳನ್ನು ಸೃಷ್ಠಿಸಿ ಮೋಸ ಮಾಡಿರುವ ಆರೋಪಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ನಡೆದ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಗರದ ತಾವರಗೆರೆ ನಿವಾಸಿ ಎಚ್.ಸಿ. ವೆಂಕಟೇಶ್ ಎಂಬಾತನೇ ನಕಲಿ ದಾಖಲೆ ಸೃಷ್ಠಿಸಿ ಉದ್ಯೋಗ ಕೊಡಿಸುವುದಾಗಿ ವಂಚಿಸಿರುವ ಆರೋಪಿಯಾಗಿದ್ದಾನೆ.
ನಗರದ ಸಾಹುಕಾರ್ ಚನ್ನಯ್ಯ ಬಡಾವಣೆಯ ಎಸ್.ಕೆ. ಗಾಯಿತ್ರಿ ಅವರಿಂದ ಅಬಕಾರಿ ಇಲಾಖೆಯಲ್ಲಿ ಅವರ ಮಕ್ಕಳಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ 14 ಲಕ್ಷ ರೂ.ಗಳನ್ನು ಪಡೆದು ವಂಚಿಸಿದ್ದಾನೆ. ನೇತ್ರಾವತಿ ಎಂಬುವರ ಮಗನಿಗೆ ಶಿಕ್ಷಣ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ 12.24 ಲಕ್ಷ ರೂ.ಗಳನ್ನು ಪಡೆದು ವಂಚಿಸಿದ್ದಾನೆ. ಇದೇ ರೀತಿ ಮತ್ತೊಬ್ಬರು ವಂಚನೆ ಪ್ರಕರಣ ದಾಖಲಿಸಿದ್ದಾರೆ ಎಂದು ವಿವರಿಸಿದರು.