ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 2026ರ 8ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಅನುಭವಿಸಿದ ಸೋಲಿನ ಬಳಿಕ ಹಂಗಾಮಿ ನಾಯಕ ಸೂರ್ಯಕುಮಾರ್ ಯಾದವ್ ತಂಡದ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡಿದ್ದಾರೆ.
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ 20 ಓವರ್‌ಗಳಲ್ಲಿ 162 ರನ್ ಗಳಿಸಿತು. ಈ ಗುರಿಯನ್ನು ಡೆಲ್ಲಿ 18.1 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಯಶಸ್ವಿಯಾಗಿ ಬೆನ್ನಟ್ಟಿತು.
ಪಂದ್ಯದ ಬಳಿಕ ಮಾತನಾಡಿದ ಸೂರ್ಯಕುಮಾರ್, ಈ ಪಿಚ್‌ನಲ್ಲಿ ನಾವು ಕನಿಷ್ಠ 180 ರಿಂದ 185 ರನ್ ಗಳಿಸಬೇಕಾಗಿತ್ತು. ನಮ್ಮ ಬ್ಯಾಟಿಂಗ್‌ನಿಂದ 15-20 ರನ್ ಕಡಿಮೆ ಬಂದಿದ್ದು, ಅದೇ ಅಂತಿಮವಾಗಿ ಸೋಲಿಗೆ ಕಾರಣವಾಯಿತು ಎಂದು ಹೇಳಿದರು. ಮುಂಬೈ ಪರ ಸ್ವತಃ ಅವರು 36 ಎಸೆತಗಳಲ್ಲಿ 51 ರನ್‌ಗಳ ಅರ್ಧಶತಕ ಸಿಡಿಸಿ ತಂಡವನ್ನು ಹೋರಾಟದ ಮೊತ್ತದತ್ತ ಕೊಂಡೊಯ್ದಿದ್ದರು.
ಇದನ್ನೂ ಓದಿ:
ಇನ್ನೊಂದೆಡೆ, ಡೆಲ್ಲಿ ಇನ್ನಿಂಗ್ಸ್ ಆರಂಭದಲ್ಲೇ ಒತ್ತಡಕ್ಕೆ ಸಿಲುಕಿತ್ತು. ಕೇವಲ 7 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ವೇಳೆ ಕ್ರೀಸ್‌ಗೆ ಬಂದ ಸಮೀರ್ ರಿಝ್ವಿ ಪಂದ್ಯದ ಚಿತ್ರವನ್ನೇ ಬದಲಿಸಿದರು. ಅವರು 51 ಎಸೆತಗಳಲ್ಲಿ 90 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದು, ಮುಂಬೈ ಬೌಲರ್‌ಗಳಿಗೆ ಯಾವುದೇ ಅವಕಾಶ ನೀಡಲಿಲ್ಲ.
ರಿಝ್ವಿ ವಿಕೆಟ್ ಬೇಗ ಸಿಕ್ಕಿದ್ದರೆ ಪಂದ್ಯ ನಮ್ಮ ಕಡೆ ತಿರುಗಬಹುದಿತ್ತು. ಆದರೆ ಅವರ ಬ್ಯಾಟಿಂಗ್ ಸಂಪೂರ್ಣವಾಗಿ ಆಟದ ದಿಕ್ಕೇ ಬದಲಿಸಿತು, ಎಂದು ಸೂರ್ಯಕುಮಾರ್ ಒಪ್ಪಿಕೊಂಡರು.
ಸೋಲಿನ ಹೊರತಾಗಿಯೂ ತಂಡದ ಆತ್ಮವಿಶ್ವಾಸ ಅಚಲವಾಗಿದೆ ಎಂದು ತಿಳಿಸಿದ ಅವರು, ಮುಂದಿನ ಪಂದ್ಯದಲ್ಲಿ ಇನ್ನಷ್ಟು ಬಲವಾಗಿ ಮರಳುವ ವಿಶ್ವಾಸ ವ್ಯಕ್ತಪಡಿಸಿದರು. ಮುಂಬೈ ತಂಡವು ಈಗ ಮುಂದಿನ ಕಾಳಗದಲ್ಲಿ ಗೆಲುವಿನ ಲಯಕ್ಕೆ ಮರಳಲು ಸಿದ್ಧತೆ ಆರಂಭಿಸಿದೆ.



