May 6, 2026
Wednesday, May 6, 2026
spot_img

ಕೊಡಗಿನಲ್ಲಿ ನಾಪತ್ತೆಯಾಗಿದ್ದ ಕೇರಳದ ಯುವತಿ ಪತ್ತೆಗೆ ಹೆಚ್ಚುವರಿ ತಂಡ ನಿಯೋಜನೆ, ಡ್ರೋನ್ ಶೋಧ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಡಗಿನ ಚಾರಣ ತಾಣ ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್ ತೆರಳಿದ್ದ ಕೇರಳದ ಕೋಯಿಕ್ಕೋಡ್ ನಿವಾಸಿ ಶರಣ್ಯ ನಾಪತ್ತೆಯಾಗಿ ದಿನಗಳು ಉರುಳುತ್ತಿದ್ದು, ಈ ಹಿನ್ನೆಲೆ ಇಂದು ಹೆಚ್ಚುವರಿಯಾಗಿ 40 ಸಿಬ್ಬಂದಿಯ 4 ತಂಡ ನಿಯೋಜಿಸಲು ಹಾಗೂ ಡ್ರೋನ್ ಕ್ಯಾಮರಾ ಬಳಸುವಂತೆ ತಿಳಿಸಲಾಗಿದೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಎರ್ನಾಕುಲಂನಲ್ಲಿ ಐಟಿ ಉದ್ಯೋಗಿಯಾಗಿರುವ ಶರಣ್ಯಾ ಮಡಿಕೇರಿಯ ಕಕ್ಕಬ್ಬೆ ಗ್ರಾಮದ ಹೋಂಸ್ಟೇಯೊಂದರಲ್ಲಿ ತಂಗಿದ್ದು, ಚಾರಣಕ್ಕೆಂದು ತೆರಳಿದ್ದರು. ಒಂಟಿಯಾಗಿ ಬಂದಿದ್ದ ಕಾರಣ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಬಳಿ ಬೇರೊಂದು ಗುಂಪಿನ ಜೊತೆಗೆ ಶರಣ್ಯಾ ಅವರನ್ನು ಬೆಟ್ಟದ ಮೇಲೆ ಕಳುಹಿಸಲಾಗಿತ್ತು. ಆದರೆ, ನಿಗದಿತ ಸಮಯಕ್ಕೆ ಅವರು ವಾಪಸ್ ಬಂದಿರಲಿಲ್ಲ. ಹೀಗಾಗಿ ಗಾಬರಿಯಾದ ಹೋಂಸ್ಟೇ ಮಾಲೀಕರು ಅವರಿಗೆ ಫೋನ್ ಮಾಡಿದಾಗ, ಮೊದಲು ಕರೆ ಸ್ವೀಕರಿಸಿದ ಶರಣ್ಯಾ ತಾನು ದಾರಿ ತಪ್ಪಿರುವುದಾಗಿ ತಿಳಿಸಿದ್ದರು. ಆದರೆ ತಕ್ಷಣವೇ ಫೋನ್ ಕಟ್ ಆಗಿದ್ದು, ಆನಂತರ ಸಂಪರ್ಕಕ್ಕೆ ಸಿಕ್ಕಿಲ್ಲ. ಇದರಿಂದ ಆತಂಕಗೊಂಡು ಅರಣ್ಯ ಇಲಾಖೆ, ಪೊಲೀಸ್ ಮತ್ತು ನಕ್ಸಲ್ ನಿಗ್ರಹ ಪಡೆಯ ಸುಮಾರು 60ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ತೀವ್ರ ಶೋಧ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಯುವತಿ ಕೊನೆಯ ಬಾರಿ ಮಾತನಾಡಿದ ಜಾಗದ ಫೊನ್ ಲೊಕೇಷನ್ ಆಧರಿಸಿ ಶೋಧ ನಡೆಸಲಾಗುತ್ತಿದೆ. ಸ್ಥಳೀಯ ಬುಡಕಟ್ಟು ಜನರೂ ನೆರವಿಗೆ ಧಾವಿಸಿದ್ದು, ಅತ್ಯಾಧುನಿಕ ಥರ್ಮಲ್ ಡ್ರೋನ್ ಕ್ಯಾಮರಾಗಳ ನೆರವೂ ಪಡೆಯಲಾಗಿದೆ. ಹೆಚ್ಚುವರಿ ತಂಡ ನಿಯೋಜಿಸಲಾಗಿದೆ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಯುವತಿ ನಾಪತ್ತೆ ವಿಚಾರ ತಿಳಿದು ಆತಂಕ ವ್ಯಕ್ತಪಡಿಸಿದ್ದು, ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವಂತೆ ಸೂಚನೆ ನೀಡಿದ್ದಾರೆ. ಕಾಣೆಯಾಗಿರುವ ಯುವತಿಯ ಪತ್ತೆಗೆ ಪ್ರಾಮಾಣಿಕ ಪ್ರಯತ್ನ ಮುಂದುವರಿದಿದೆ ಎಂದು ಈಶ್ವರ ಖಂಡ್ರೆ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !