June 24, 2026
Wednesday, June 24, 2026
spot_img

ಬಯೋಮೆಟ್ರಿಕ್ ಲಾಕ್ ತಂದೊಡ್ಡಿದ ಕಂಟಕಕ್ಕೆ 15 ಜೀವ ಬಲಿ; ಯುಪಿಯಲ್ಲಿ ನಾಲ್ವರು ಅಧಿಕಾರಿಗಳ ಸಸ್ಪೆಂಡ್

ಹೊಸದಿಗಂತ ಡಿಜಿಟಲ್‌ ಡೆಸ್ಕ್

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರ ಭಾರಿ ಆಡಳಿತಾತ್ಮಕ ಕ್ರಮ ಕೈಗೊಂಡಿದೆ. ಕರ್ತವ್ಯ ಲೋಪದ ಆರೋಪದ ಮೇಲೆ ವಿವಿಧ ಇಲಾಖೆಗಳ ನಾಲ್ವರು ಹಿರಿಯ ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದ್ದು, ಘಟನೆಗೆ ಕಾರಣರಾದ ನಾಲ್ವರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಲಕ್ನೋದ ಅಲಿಗಂಜ್ ಪ್ರದೇಶದ ಪುರನಿಯಾದಲ್ಲಿರುವ ಮೂರು ಅಂತಸ್ತಿನ ವಾಣಿಜ್ಯ ಕಟ್ಟಡದಲ್ಲಿ ಸಂಭವಿಸಿದ ಈ ಅಗ್ನಿ ಅವಘಡದಲ್ಲಿ ಅನಿಮೇಷನ್ ಕೋಚಿಂಗ್ ಸೆಂಟರ್‌ನ ಕನಿಷ್ಠ 15 ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿದ್ದರು. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.

ಅಮಾನತುಗೊಂಡ ಅಧಿಕಾರಿಗಳು:

ಕಟ್ಟಡದ ಅಕ್ರಮ ನಿರ್ಮಾಣ ಮತ್ತು ಸುರಕ್ಷತಾ ನಿಯಮಗಳ ಉಲ್ಲಂಘನೆಗೆ ಆಸ್ಪದ ಮಾಡಿಕೊಟ್ಟ ಆರೋಪದ ಮೇಲೆ  ಕಾರ್ಯಪಾಲಕ ಎಂಜಿನಿಯರ್ ಗೌರವ್ ಕುಮಾರ್, ಅಗ್ನಿಶಾಮಕ ಸುರಕ್ಷತಾ ಅಧಿಕಾರಿ ಕಮಲೇಂದ್ರ ಕುಮಾರ್ ಸಿಂಗ್, ಸಹಾಯಕ ಎಂಜಿನಿಯರ್ ಅನಿಲ್ ಕುಮಾರ್, ಕಿರಿಯ ಎಂಜಿನಿಯರ್ ಪ್ರಮೋದ್ ಕುಮಾರ್‌ನನ್ನುಸಸ್ಪೆಂಡ್ ಮಾಡಲಾಗಿದೆ.

ನಾಲ್ವರ ಬಂಧನ:

ಸುರಕ್ಷತಾ ಮಾನದಂಡಗಳನ್ನು ಗಾಳಿಗೆ ತೂರಿ ವಾಣಿಜ್ಯ ಸಂಕೀರ್ಣ ನಡೆಸುತ್ತಿದ್ದ ಕಟ್ಟಡದ ಜಂಟಿ ಮಾಲೀಕರು ಸೇರಿದಂತೆ ನಾಲ್ವರನ್ನು ಅಲಿಗಂಜ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ವೀರೇಂದ್ರ ಪ್ರಸಾದ್ ಶುಕ್ಲಾ, ರಾಮಕೃಷ್ಣ ಉಪಾಧ್ಯಾಯ, ತುಷಾರ್ ಕೃಷ್ಣ ಜೈಸ್ವಾಲ್ ಮತ್ತು ಸುರೇಶ್ ಕುಮಾರ್ ಸಾಹು ಎಂದು ಗುರುತಿಸಲಾಗಿದೆ. ಒಟ್ಟು ಆರು ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಉಳಿದ ಇಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಬಯೋಮೆಟ್ರಿಕ್ ಲಾಕ್ ತಂದೊಡ್ಡಿದ ಕಂಟಕ:

ಮೂಲಗಳ ಪ್ರಕಾರ, ವಸತಿ ಉದ್ದೇಶದ ನಕ್ಷೆ ಹೊಂದಿದ್ದ ಕಟ್ಟಡದಲ್ಲಿ ಯಾವುದೇ ತುರ್ತು ನಿರ್ಗಮನ ವ್ಯವಸ್ಥೆ ಇರಲಿಲ್ಲ. ಬೆಂಕಿ ಕಾಣಿಸಿಕೊಂಡ ತಕ್ಷಣ ವಿದ್ಯುತ್ ಸಂಪರ್ಕ ಕಡಿತಗೊಂಡು ಕಟ್ಟಡದ ಮುಖ್ಯ ದ್ವಾರದ ಬಯೋಮೆಟ್ರಿಕ್ ಲಾಕ್ ವ್ಯವಸ್ಥೆಯು ಸ್ತಬ್ಧವಾಗಿದೆ. ಇದರಿಂದಾಗಿ ದಟ್ಟ ಹೊಗೆಯ ನಡುವೆ ಸಿಲುಕಿದ ವಿದ್ಯಾರ್ಥಿಗಳಿಗೆ ಹೊರಹೋಗಲು ದಾರಿ ಸಿಗದೆ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಇದನ್ನೂ ಓದಿ:

ಎಸ್‌ಐಟಿ ತನಿಖೆಗೆ ಆದೇಶ, ಪರಿಹಾರ ಘೋಷಣೆ:

ಘಟನೆಯ ಸಮಗ್ರ ತನಿಖೆಗಾಗಿ ಯೋಗಿ ಆದಿತ್ಯನಾಥ್ ಸರ್ಕಾರವು ವಿಶೇಷ ತನಿಖಾ ತಂಡವನ್ನು  ರಚಿಸಿದ್ದು, 7 ದಿನಗಳಲ್ಲಿ ವರದಿ ನೀಡುವಂತೆ ಸೂಚಿಸಿದೆ. ಮೃತರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ತಲಾ 2 ಲಕ್ಷ ರೂ. ಹಾಗೂ ಗಾಯಾಳುಗಳಿಗೆ ತಲಾ 50 ಸಾವಿರ ರೂ.ಗಳ ಪರಿಹಾರ ಘೋಷಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !