ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದಲ್ಲಿ ಆಳುವ ಸಿಪಿಎಂನ ವಿದ್ಯಾರ್ಥಿ ಸಂಘಟನೆ ಎಸ್‌ಎಫ್‌ಐ ಅಂಕಪಟ್ಟಿ ಹಗರಣದಲ್ಲಿ ಶಾಮೀಲಾಗಿರುವುದು ಬೆಳಕಿಗೆ ಬಂದ ಬೆನ್ನಿಗೇ, ಇಲ್ಲಿನ ಮಹಾತ್ಮಾಗಾಂಧಿ ವಿಶ್ವವಿದ್ಯಾಲಯದಿಂದ 154 ಬ್ಲಾಂಕ್ ಪದವಿಪೂರ್ವ (ಯುಜಿ)ಮತ್ತು ಸ್ನಾತಕೋತ್ತರ ಪದವಿ(ಪಿಜಿ) ಪ್ರಮಾಣಪತ್ರಗಳು ನಾಪತ್ತೆಯಾಗಿರುವ ಆಘಾತಕಾರಿ ಅಂಶ ಬಹಿರಂಗಗೊಂಡಿದೆ.
ಕೇರಳದಲ್ಲಿ ಕಾನೂನು -ಸುವ್ಯವಸ್ಥೆ ಹದಗೆಡುತ್ತಿರುವ ಜೊತೆಗೆ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮಗಳು ಮುಂದಿನ ಪೀಳಿಗೆಯ ಭವಿಷ್ಯದೊಂದಿಗೇ ಚೆಲ್ಲಾಟವಾಡುತ್ತಿವೆ ಎಂಬುದಾಗಿ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಕಳವಳ ವ್ಯಕ್ತಪಡಿಸಿದ ಬೆನ್ನಿಗೇ ಈ ಸಂಗತಿ ಬೆಳಕಿಗೆ ಬಂದಿದೆ.
ಕೊಟ್ಟಾಯಂನ ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯದಲ್ಲಿ ಹೊಸ ಸೆಕ್ಷನ್ ಆಫೀಸರ್ ಅವರು ಜೂ.2ರಂದು ಅಧಿಕಾರ ವಹಿಸಿಕೊಂಡ ವೇಳೆ ಖಾಲಿ ಪ್ರಮಾಣಪತ್ರಗಳು ನಾಪತ್ತೆಯಾಗಿರುವುದು ಪ್ರಮಾಣಪತ್ರ ಹಗರಣ ಭಾರೀ ಪ್ರಮಾಣದಲ್ಲಿ ನಡೆದಿರುವ ಆತಂಕಕ್ಕೆ ಪುಷ್ಟಿ ನೀಡಿದೆ. ಕೇರಳದಲ್ಲಿ ಆಳುವ ಎಡರಂಗ ಸರಕಾರದಡಿ ಶಿಕ್ಷಣ ಕ್ಷೇತ್ರದಲ್ಲಿ ಅವ್ಯಾಹತ ಅಕ್ರಮಗಳು, ಹಗರಣಗಳು ನಡೆಯುತ್ತಿದ್ದು, ಇದನ್ನು ಮುಚ್ಚಿಹಾಕಲು ರಾಜಕೀಯ ಹಸ್ತಕ್ಷೇಪಗಳು ನಡೆಯುತ್ತಿವೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿರುವಾಗ ಮಹಾತ್ಮಾಗಾಂಧಿ ವಿವಿಯಲ್ಲಿ ಈ ಹೊಸ ಅಕ್ರಮ ಬೆಳಕಿಗೆ ಬಂದಿದೆ.
ವಿವಿಯ ಪರೀಕ್ಷಾ ಭವನದ ಗರಿಷ್ಠ ಭದ್ರತೆಯ ಪರೀಕ್ಷಾ ವಿಭಾಗದಿಂದಲೇ 154 ಖಾಲಿ ಪ್ರಮಾಣಪತ್ರಗಳು ನಾಪತ್ತೆಯಾಗಿರುವುದನ್ನು ಪ್ರಭಾರಿ ಉಪಕುಲಪತಿ ಡಾ.ಸಿ.ಟಿ.ಅರವಿಂದಕುಮಾರ್ ದೃಢಪಡಿಸಿದ್ದಾರೆ. ಈ ಪೈಕಿ 100 ಪದವಿಪೂರ್ವ ಪ್ರಮಾಣಪತ್ರಗಳಾದರೆ 54 ಸ್ನಾತಕೋತ್ತರ ಪದವಿ ಪ್ರಮಾಣಪತ್ರಗಳಾಗಿವೆ ಎಂದು ಪರೀಕ್ಷಾ ನಿಯಂತ್ರಕ ಡಾ.ಸಿ.ಎಂ.ಶ್ರೀಜಿತ್ ತಿಳಿಸಿದ್ದಾರೆ. ಈ ಬಗ್ಗೆ ಈಗ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ ಎಂದು ಅವರು ಹೇಳಿದರು. ಅಲ್ಲದೆ ಪರಾಕ್ಷಾ ಭವನವು ಕುಲಪತಿ ಮತ್ತು ರಿಜಿಸ್ಟ್ರಾರ್ ಅವರಿಗೆ ವರದಿಯೊಂದನ್ನು ನೀಡಿದೆ.
ಪತ್ತೆಯಾಗಿವೆಯಂತೆ !
ಈ ನಡುವೆ ನಾಪತ್ತೆಯಾದ ಸ್ನಾತಕೋತ್ತರ ಪದವಿ ಪ್ರಮಾಣಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂಬುದಾಗಿ ಇದೀಗ ಸಂಬಂಧಿಸಿದ ವಿವಿ ಇಲಾಖೆ ಹೇಳಿಕೊಂಡಿದೆ. ಅವು ಸೆಕ್ಷನ್ ಕ್ಲೆರ್ಕ್ ಅವರ ಟೇಬಲ್‌ನ ಮೇಲೆ ಪತ್ತೆಯಾಗಿದೆ ಎಂದು ಸಮಜಾಯಿಷಿ ನೀಡಲಾಗಿದೆ.ಈ ಪ್ರಮಾಣಪತ್ರಗಳನ್ನು ವಿವಿಯ ಲೋಗೋ ಮತ್ತು 20 ಇತರ ಭದ್ರತಾ ವಾಟರ್ ಮಾರ್ಕ್‌ಗಳನ್ನು ಚೆನ್ನೈಯ ಮುದ್ರಣಾಲಯವೊಂದರಲ್ಲಿ ಮುದ್ರಿಸಿ ನೇರವಾಗಿ ವಿವಿಯ ಈ ಸ್ಟೋರ್‌ಗೆ ತಲುಪಿಸಿ ಭಾರೀ ಭದ್ರತೆಯಲ್ಲಿ ಇರಿಸಲಾಗಿತ್ತು.ಅದು ಗುಮಾಸ್ತನೊಬ್ಬನ ಟೇಬಲ್‌ಗೆ ತಲುಪಿದ್ದು ಹೇಗೆ ಎಂಬುದೀಗ ಕುತೂಹಲಕಾರಿಯಾಗಿದೆ.
ಕೇರಳದಲ್ಲಿ ಎಡರಂಗ ಆಳ್ವಿಕೆಯಡಿ ಅಂಕ ಹಗರಣಗಳು, ಅಕ್ರಮ ನೇಮಕಾತಿಗಳು, ವಿದ್ಯಾರ್ಥಿಗಳಿಗೆ ಪ್ರವೇಶ ಅಕ್ರಮ, ನಕಲಿ ಸರ್ಟಿಫಿಕೇಟ್‌ಗಳಂತಹ ಅಕ್ರಮಗಳು ಅವ್ಯಾಹತವಾಗಿ ನಡೆಯುತ್ತಿರುವ ಬಗ್ಗೆ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಕಳವಳ ವ್ಯಕ್ತಪಡಿಸಿದ್ದು, ಇದು ರಾಜ್ಯದ ಮುಂದಿನ ಪೀಳಿಗೆಯ ಭವಿಷ್ಯದ ಜೊತೆ ನಡೆಸುವ ಚೆಲ್ಲಾಟ ಎಂದು ಜನತೆಯನ್ನು ಎಚ್ಚರಿಸಿದ್ದಾರೆ. ಕೇರಳದಲ್ಲಿ ಅಪರಾಧ ಕೃತ್ಯಗಳು ಹೆಚ್ಚುತ್ತಿದ್ದು, ಕಾನೂನು-ಸುವ್ಯವಸ್ಥೆ ಹದಗೆಟ್ಟರೆ ನಾಗರಿಕರು ಸಂಕಷ್ಟಕ್ಕೀಡಾಗುತ್ತಾರೆ. ಆದರೆ ಉನ್ನತ ಶಿಕ್ಷಣ ಕ್ಷೇತ್ರ ಹದಗೆಟ್ಟರೆ ವಿದ್ಯಾರ್ಥಿಗಳ ಭವಿಷ್ಯವೇ ಹಾಳಾಗುತ್ತದೆ. ಇದರಿಂದಾಗಿಯೇ ಕೇರಳದಿಂದ ಪ್ರತಿಭಾ ಪಲಾಯನ ನಡೆಯುತ್ತಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ. ಆದರೆ ಎಡರಂಗ ನಾಯಕರು ರಾಜ್ಯಪಾಲರ ವಿರುದ್ಧ ಟೀಕಾದಾಳಿ ನಡೆಸುತ್ತಿದ್ದಾರೆ.