ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೈಪುರಿಯ ವಿದ್ಯಾಲಯ ಮೈದಾನದಲ್ಲಿ ನಡೆದ ವಿಜಯ ಹಝಾರೆ ಟೂರ್ನಿಯ ಗ್ರೂಪ್-ಸಿ ಪಂದ್ಯದಲ್ಲಿ ಮುಂಬೈ ತಂಡ ರನ್ ಮಳೆ ಹರಿಸಿದೆ. ಸರ್ಫರಾಝ್ ಖಾನ್ ಅವರ ಸಿಡಿಲಬ್ಬರದ ಶತಕ ಹಾಗೂ ಸಹೋದರ ಮುಶೀರ್ ಖಾನ್ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಮುಂಬೈ ತಂಡ ಗೋವಾ ವಿರುದ್ಧ ಬೃಹತ್ ಮೊತ್ತ ಪೇರಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈಗೆ ಯಶಸ್ವಿ ಜೈಸ್ವಾಲ್ (46) ಉತ್ತಮ ಅಡಿಪಾಯ ಹಾಕಿಕೊಟ್ಟರು. ಇವರಿಗೆ ಸಾಥ್ ನೀಡಿದ ಮುಶೀರ್ ಖಾನ್, 66 ಎಸೆತಗಳಲ್ಲಿ 60 ರನ್ (2 ಸಿಕ್ಸರ್, 5 ಫೋರ್) ಬಾರಿಸಿ ತಂಡಕ್ಕೆ ಆಸರೆಯಾದರು. ಆದರೆ ಪಂದ್ಯದ ಅಸಲಿ ಚಿತ್ರಣ ಬದಲಾಗಿದ್ದು ಸರ್ಫರಾಝ್ ಖಾನ್ ಕ್ರೀಸ್‌ಗೆ ಬಂದ ಮೇಲೆ.
ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸರ್ಫರಾಝ್ ಖಾನ್ ಗೋವಾ ಬೌಲರ್‌ಗಳನ್ನು ಅಕ್ಷರಶಃ ದಂಡಿಸಿದರು. ಮೈದಾನದ ನಾಲ್ಕೂ ದಿಕ್ಕುಗಳಿಗೆ ಚೆಂಡನ್ನು ಅಟ್ಟಿದ ಅವರು ಕೇವಲ 56 ಎಸೆತಗಳಲ್ಲಿ ಶತಕ ಪೂರೈಸಿ ಅಬ್ಬರಿಸಿದರು. ಶತಕದ ನಂತರ ಮತ್ತಷ್ಟು ಭೀಕರ ರೂಪ ತಾಳಿದ ಸರ್ಫರಾಝ್, ಒಟ್ಟಾರೆ 75 ಎಸೆತಗಳಲ್ಲಿ 157 ರನ್ (14 ಸಿಕ್ಸರ್, 9 ಫೋರ್) ಚಚ್ಚಿ ಪಂದ್ಯವನ್ನು ಏಕಪಕ್ಷೀಯಗೊಳಿಸಿದರು.
ಖಾನ್ ಸಹೋದರರ ಅಬ್ಬರಕ್ಕೆ 40 ಓವರ್‌ಗಳಲ್ಲೇ ಮುಂಬೈ 300ರ ಗಡಿ ದಾಟಿತು. ಅಂತ್ಯದಲ್ಲಿ ನಾಯಕ ಶಾರ್ದೂಲ್ ಠಾಕೂರ್ (8 ಎಸೆತಗಳಲ್ಲಿ 27 ರನ್) ಮತ್ತು ವಿಕೆಟ್ ಕೀಪರ್ ಹಾರ್ದಿಕ್ ತಮೋರೆ (28 ಎಸೆತಗಳಲ್ಲಿ 53 ರನ್) ಮಿಂಚಿನ ಬ್ಯಾಟಿಂಗ್ ನಡೆಸಿದರು. ಪರಿಣಾಮವಾಗಿ ಮುಂಬೈ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 444 ರನ್ ಗಳಿಸಿತು. ಇದು ವಿಜಯ ಹಝಾರೆ ಟೂರ್ನಿಯ ಇತಿಹಾಸದಲ್ಲೇ ದಾಖಲಾದ 4ನೇ ಗರಿಷ್ಠ ಸ್ಕೋರ್ ಆಗಿದೆ.

