ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯಲ್ಲಿ ಆಪರೇಷನ್ ಸಿಂದೂರ್ ಮತ್ತು ಪಹಲ್ಗಾಮ್ ಉಗ್ರರ ದಾಳಿ ಕುರಿತು 16 ಗಂಟೆ ಚರ್ಚೆಗೆ ಕೇಂದ್ರ ಸರ್ಕಾರ ಸೋಮವಾರ ಒಪ್ಪಿಗೆ ನೀಡಿದೆ.
ಈ ಕುರಿತು ಚರ್ಚೆ ನಡೆಯಬೇಕು ಮತ್ತು ಪ್ರಧಾನಿ ನರೇಂದ್ರ ಮೋದಿ ಉತ್ತರಿಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸುತ್ತಿದ್ದರೂ ಮುಂದಿನ ವಾರ ಈ ವಿಚಾರವನ್ನು ಚರ್ಚೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ.ಈ ವಾರ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದು, ಮುಂದಿನ ವಾರ ಚರ್ಚೆ ನಡೆದರೆ ಪ್ರಧಾನಿ ಸದನದಲ್ಲಿ ಹಾಜರಿರುವ ಮೂಲಕ ಉತ್ತರ ನೀಡಲಿದ್ದಾರೆ ಎಂದು ಕಾರ್ಯ ಕಲಾಪ ಸಮಿತಿ ಸಭೆಯಲ್ಲಿ ಸರ್ಕಾರದ ಪ್ರತಿನಿಧಿಗಳು ಹೇಳಿರುವುದಾಗಿ ಮೂಲಗಳು ಹೇಳಿವೆ.
ಇದೇ ವಾರ ಪಹಲ್ಗಾಮ್ ದಾಳಿ, ಆಪರೇಷನ್ ಸಿಂದೂರ್ ಹಾಗೂ ಭಾರತ-ಪಾಕಿಸ್ತಾನ ನಡುವಣ ಕದನ ವಿರಾಮ ಜಾರಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಕುರಿತು ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಉತ್ತರಿಸಬೇಕು ಎಂಬ ತಮ್ಮ ಬೇಡಿಕೆಯನ್ನು ಸರ್ಕಾರದ ಕಾರ್ಯಸೂಚಿಯಲ್ಲಿ ಉಲ್ಲೇಖಿಸಿಲ್ಲ ಎಂದು ಆರೋಪಿಸಿ ವಿಪಕ್ಷ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.
ಪ್ರಧಾನಿ ಹೇಳಿಕೆ ನೀಡುವಾಗ ಗೃಹ ಹಾಗೂ ರಕ್ಷಣಾ ಸಚಿವರು ಕೂಡಾ ಸದನದಲ್ಲಿ ಇರಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ.