March 18, 2026
Wednesday, March 18, 2026
spot_img

ಕ್ಯೂನಲ್ಲಿದೆ 16 ಹಡಗುಗಳು: ಹೋಟೆಲ್‌ ಮಾಲೀಕರೇ, ಒಂದು ವಾರ ಅಡ್ಜಸ್ಟ್ ಮಾಡಿಕೊಳ್ಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಉಂಟಾಗಿರುವ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ ಕೊರತೆಯ ಹಿನ್ನೆಲೆಯಲ್ಲಿ, ಹೊಟೇಲ್ ಮತ್ತು ರೆಸ್ಟೋರೆಂಟ್ ಮಾಲೀಕರು ಕನಿಷ್ಠ ಒಂದು ವಾರಗಳ ಕಾಲ ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಮನವಿ ಮಾಡಿದ್ದಾರೆ.

ವಿಧಾನ ಪರಿಷತ್‌ನಲ್ಲಿ ಈ ಕುರಿತು ಮಾಹಿತಿ ನೀಡಿದ ಸಚಿವರು, ಗ್ಯಾಸ್ ಸಮಸ್ಯೆಯ ಆಳ ಮತ್ತು ಸರ್ಕಾರದ ಮುಂದಿರುವ ಸವಾಲುಗಳನ್ನು ವಿವರಿಸಿದರು.

ರಾಜ್ಯದಲ್ಲಿ ಮನೆ ಬಳಕೆಯ ಸಿಲಿಂಡರ್‌ಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲ. ಪ್ರತಿದಿನ ಸುಮಾರು 3 ಲಕ್ಷಕ್ಕೂ ಹೆಚ್ಚು ಸಿಲಿಂಡರ್‌ಗಳನ್ನು ಪೂರೈಸಲಾಗುತ್ತಿದೆ.

ಕೇಂದ್ರ ಸರ್ಕಾರದ ಸೂಚನೆಯಂತೆ ಕೇವಲ 20% ವಾಣಿಜ್ಯ ಗ್ಯಾಸ್ ಮಾತ್ರ ಲಭ್ಯವಾಗುತ್ತಿದೆ. ಪ್ರಸ್ತುತ ಲಭ್ಯವಿರುವ 9 ಸಾವಿರ ಸಿಲಿಂಡರ್‌ಗಳಲ್ಲಿ ಆಸ್ಪತ್ರೆಗಳು, ವಸತಿ ಶಾಲೆಗಳು, ಹಾಸ್ಟೆಲ್‌ಗಳು ಮತ್ತು ಇಂದಿರಾ ಕ್ಯಾಂಟೀನ್‌ಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ.

ಹೊಟೇಲ್ ಮತ್ತು ರೆಸ್ಟೋರೆಂಟ್‌ಗಳಿಗೆ ಸದ್ಯಕ್ಕೆ ಕೇವಲ 1 ಸಾವಿರ ಸಿಲಿಂಡರ್ ನೀಡಲು ಮಾತ್ರ ಅವಕಾಶವಿದೆ. ಈ ಅಲ್ಪ ಪ್ರಮಾಣವನ್ನು ಯಾರಿಗೆ ಹಂಚಬೇಕು ಎಂಬ ಗೊಂದಲ ಇರುವುದರಿಂದ, ಒಂದು ವಾರ ಸಹಕರಿಸುವಂತೆ ಹೋಟೆಲ್ ಅಸೋಸಿಯೇಷನ್ ಮುಖಂಡರಲ್ಲಿ ಸಚಿವರು ವಿನಂತಿಸಿದ್ದಾರೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಕೇಂದ್ರ ಸರ್ಕಾರವು ಇರಾನ್ ಜೊತೆ ಮಾತುಕತೆ ನಡೆಸುತ್ತಿದ್ದು, ಈಗಾಗಲೇ 16 ಹಡಗುಗಳು ಸರದಿಯಲ್ಲಿವೆ. ಅವು ಬಂದ ಕೂಡಲೇ ಸಮಸ್ಯೆ ಇತ್ಯರ್ಥವಾಗಲಿದೆ.

“ಹೋಟೆಲ್ ಅಸೋಸಿಯೇಷನ್ ಜೊತೆ ನಾವು ಮಾತುಕತೆ ನಡೆಸಿದ್ದೇವೆ. ಮುಂದಿನ ಒಂದು ವಾರ ಸಹಕರಿಸಿದರೆ, ಸುಮಾರು 15 ಸಾವಿರ ಸಿಲಿಂಡರ್ ಸಂಗ್ರಹಿಸಿ ಅದನ್ನು ಅಸೋಸಿಯೇಷನ್ ಮೂಲಕ ಸಮರ್ಪಕವಾಗಿ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು.” ಎಂದು ಕೆ.ಎಚ್. ಮುನಿಯಪ್ಪ ತಿಳಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !