ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಧ್ಯಪ್ರದೇಶದ ಉಜ್ಜಯನಿಯಲ್ಲಿ 10ನೇ ತರಗತಿಯ ವಿದ್ಯಾರ್ಥಿಯೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಬಂದ ಕೆಟ್ಟ ಕಮೆಂಟ್ಸ್ ಕಾರಣ ಎಂದು ಶಂಕಿಸಲಾಗಿದೆ.
ಪ್ರಾಂಶು ಎಂಬ ವಿದ್ಯಾರ್ಥಿ ರೀಲ್ಸ್ ಮಾಡುತ್ತಾ ತನ್ನ Instagram ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದ. ಎಲ್ಲರಿಗಿಂತ ಸ್ವಲ್ಪ ಡಿಫರೆಂಟ್ ಆಗಿ ರೀಲ್ಸ್ ಮಾಡಲು ಯತ್ನಿಸಿ, ಹೆಣ್ಣುಮಕ್ಕಳಂತೆ ಮೇಕಪ್ ಹಾಕಿಕೊಂಡು ಹುಡುಗಿಯರಂತೆಯೇ ಡ್ರೆಸ್ ಮಾಡಿಕೊಂಡು ರೀಲ್ಸ್ ಮಾಡುತ್ತಿದ್ದರು. ಸದಾ ವಿಭಿನ್ನವಾಗಿ ಪ್ರಯತ್ನಿಸುವ ಈತ ಸೀರೆಯುಟ್ಟು ಆಭರಣ ಧರಿಸಿ ರೀಲ್ ಮಾಡಿದ್ದರು. ಅದೇ ಕೊನೆಯ ವಿಡಿಯೋ ಅದಾದ ಬಳಿಕ ಪ್ರಾಂಶು ಅವರ ಮನೆಯಲ್ಲಿ ನೇಣು ಬಿಗಿದುಕೊಂಡು ಶವವಾಗಿ ಪತ್ತೆಯಾಗಿದ್ದಾರೆ.
ಪ್ರಾಣ ತೆಗೆಯಿತಾ ರೀಲ್ಸ್‌ಗೆ ಬಂದ ಕಮೆಂಟ್ಸ್?
ಪ್ರಾಂಶು ಅವರ ಆತ್ಮಹತ್ಯೆಗೆ ನೆಟ್ಟಿಗರು ಮಾಡಿದ ಟ್ರೋಲಿಂಗ್ ಮತ್ತು ಅಸಭ್ಯ ಕಾಮೆಂಟ್‌ಗಳೇ ಕಾರಣ ಎನ್ನಲಾಗಿದೆ. ಸೀರೆಯುಟ್ಟು ಅಪ್‌ಲೋಡ್ ಮಾಡಿದ್ದ ರೀಲ್‌ನಲ್ಲಿ ಬಂದ ಕಮೆಂಟ್‌ಗಳಿಂದ ಮನನೊಂದ ಬಾಲಕ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.
ಶಾಲೆಯಲ್ಲಿ ನಿಮ್ಮ ಮುಖ ಹೇಗೆ ತೋರಿಸ್ತೀರಿ? ನೀವು ತೃತೀಯ ಲಿಂಗಿಯಂತೆ ಕಾಣುತ್ತೀರಿ, ಓದುವುದು ಬಿಟ್ಟು ಇದೆಲ್ಲಾ ಬೇಕಾ ನಿನಗೆ ಎಂಬಂತಹ ಕಮೆಂಟ್‌ಗಳು ಬಾಲಕನನ್ನು ಹೆಚ್ಚು ಬಾಧಿಸಿದಂತಿವೆ. ಪ್ರಾಂಶು ಆತ್ಮಹತ್ಯೆಯ ಹಿಂದಿನ ನಿಜವಾದ ಕಾರಣವನ್ನು ಕಂಡುಹಿಡಿಯಲು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.