ಹೊಸದಿಗಂತ ಡಿಜಿಟಲ್ ಡೆಸ್ಕ್:
ತಾಲೂಕಿನ ವ್ಯಕ್ತಿಯೋರ್ವರು ಸಾಕಿದ ವಿಶೇಷ ತಳಿಯ ನಾಯಿಯ ಕಾರ್ಯಕ್ಷಮತೆ ಗಮನಿಸಿದ ಭಾರತೀಯ ಸೇನೆಯ ಅಧಿಕಾರಿಗಳು ಅಂಕೋಲಾಕ್ಕೆ ಆಗಮಿಸಿ ಸೇನಾ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲು 17 ನಾಯಿ ಮರಿಗಳನ್ನು ಕೊಂಡೊಯ್ದಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗದಲ್ಲಿರುವ ಭಾವಿಕೇರಿಯ ರಾಘವೇಂದ್ರ ಭಟ್ಟ ಅವರಿಗೆ ನಾಯಿಗಳನ್ನು ಸಾಕುವುದರಲ್ಲಿ ಅಪಾರ ಆಸಕ್ತಿಯಿದ್ದು ಕಳೆದ ಸುಮಾರು 25 ವರ್ಷಗಳಿಂದ ವಿವಿಧ ತಳಿಯ ಹಲವಾರು ನಾಯಿಗಳನ್ನು ಸಾಕಿ ಸಲುಹಿದ್ದು ಇವರು ಸಾಕಿರುವ ಬೆಲ್ಜಿಯಂ ಮೆಲಿನೋಯ್ಸ್ ತಳಿಯ ನಾಯಿಗಳು ರಕ್ಷಣಾ ಇಲಾಖೆಯ ಕಾರ್ಯಗಳಿಗೆ ಸೂಕ್ತವಾದ ದೇಹ ಮತ್ತು ಬುದ್ಧಿಮತಿಯನ್ನು ಹೊಂದಿರುವುದರಿಂದ ಸೇನೆಯ ಅಧಿಕಾರಿಗಳು 17 ನಾಯಿ ಮರಿಗಳನ್ನು ಅವರಿಂದ ಪಡೆದು ಆಸ್ಸಾಂನ ಸೇನಾ ತರಬೇತಿ ಕೇಂದ್ರಕ್ಕೆ ಸಾಗಿಸಿದ್ದು ಇನ್ನು ಮುಂದೆ ಭಾರತೀಯ ಸೇನೆಯ ವಿಶೇಷ ಪಾಲನೆಯಲ್ಲಿ ಈ ನಾಯಿ ಮರಿಗಳು ಬೆಳೆಯಲಿವೆ ಮತ್ತು ತರಬೇತಿ ಪಡೆಯಲಿವೆ.
ರಾಘವೇಂದ್ರ ಭಟ್ಟರಿಂದ ಕೊಂಡೊಯ್ದ ಇದೇ ತಳಿಯ ನಾಯಿಗಳು ಬೆಂಗಳೂರಿನ ಪೊಲೀಸ್ ಇಲಾಖೆ, ಬೆಳಗಾವಿ ಮತ್ತು ಹುಬ್ಬಳ್ಳಿ ವಿಮಾನ ನಿಲ್ದಾಣಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ಧು ಬೆಂಗಳೂರಿನ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ನಾಯಿಯ ಕಾರ್ಯಕ್ಷಮತೆ ಗಮನಿಸಿದ ಭಾರತೀಯ ಸೇನೆಯ ಅಧಿಕಾರಿಗಳು ಸಾಮಾಜಿಕ ಜಾಲ ತಾಣಗಳ ಮೂಲಕ ರಾಘವೇಂದ್ರ ಭಟ್ಟರ ಕುರಿತು ಮಾಹಿತಿ ಸಂಗ್ರಹಿಸಿ ಅವರನ್ನು ಸಂಪರ್ಕಿಸಿ ನಾಯಿ ಮರಿಗಳ ಕುರಿತು ಆಸಕ್ತಿ ತೋರಿದ್ದಾರೆ.
ಮರಿಗಳನ್ನು ನೋಡಲು ಭಾವಿಕೇರಿಗೆ ಕೆಲವು ದಿನಗಳ ಹಿಂದೆ ಆಗಮಿಸಿದ ಸೇನೆಯ ಅಧಿಕಾರಿಗಳು ಒಬ್ಬ ಜವಾನನ್ನು ಸ್ಥಳದಲ್ಲಿ ನೇಮಿಸಿ ಮರಿಗಳ ಚಲನವಲನ,ಆಹಾರ ಪದ್ಧತಿ, ಬುದ್ಧಿಮತಿ, ಆರೋಗ್ಯ ಮೊದಲಾದ ಮಾಹಿತಿಗಳನ್ನು ಪ್ರತಿದಿನ ಪಡೆದುಕೊಳ್ಳುತ್ತಿದ್ದರು ಗುರುವಾರ ಭಾವಿಕೇರಿಗೆ ಆಗಮಿಸಿದ ಅಧಿಕಾರಿಗಳ ತಂಡ ಹವಾನಿಯಂತ್ರಿತ ಬಸ್ಸಿನಲ್ಲಿ ಮರಿಗಳನ್ನು ಸಾಗಿಸಿದ್ದಾರೆ
ವಿಶೇಷ ಹವಾ ನಿಯಂತ್ರಿತ ಬಸ್ಸಿನಲ್ಲಿ ಆಸ್ಸಾಂಗೆ ಸಾಗಿಸಿದರು ನಾಯಿ ಮರಿಗಳ ಕುರಿತು ಅಧ್ಯಯನ ನಡೆಸಲು ಸೇನೆಯ ಜವಾನರೋರ್ವರು 45 ದಿನಗಳ ಕಾಲ ಭಾವಿಕೇರಿಯಲ್ಲಿ ವಾಸವಾಗಿದ್ದು ಪ್ರತಿ ದಿನ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸುತ್ತಿದ್ದರು.
ನಾಯಿ ಮರಿಗಳನ್ನು ಕಾಳಜಿ ಪೂರ್ವಕವಾಗಿ ವಿಶೇಷ ಹವಾ ನಿಯಂತ್ರಿತ ಬಸ್ಸಿನಲ್ಲಿ ಆಸ್ಸಾಂಗೆ ಸಾಗಿಸಲಾಗಿದೆ
ರಾಘವೇಂದ್ರ ಭಟ್ಟ ಮತ್ತು ಅವರ ಪತ್ನಿ ರಾಜೇಶ್ವರಿ ನಾಯಿಗಳ ಆರೈಕೆ ಮತ್ತು ಆಹಾರದ ಕುರಿತು ವಿಶೇಷ ಗಮನ ನೀಡುತ್ತ ಬಂದಿದ್ದು ಗುಣಮಟ್ಟದ ಆಹಾರ ನಾಯಿಗಳಿಗೆ ನೀಡಲಾಗುತ್ತದೆ.
ಹೆಮ್ಮೆ ಸಂತಸ
ನಮ್ಮ ನಾಯಿ ಮರಿಗಳು ರಕ್ಷಣಾ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಹೊರಟಿರುವುದು ಹೆಮ್ಮೆ ಮತ್ತು ಸಂತಸ ತಂದಿದೆ.
ಬೆಲ್ಜಿಯಂ ಮೆಲಿನೋಯ್ಸ್ ತಳಿಯ ನಾಯಿಗಳು ತಮ್ಮ ಕಾರ್ಯಕ್ಷಮತೆಯಿಂದ ಸೇನೆಯಲ್ಲಿ ಮಿಂಚಲಿವೆ ಎಂದು ಶ್ವಾನ ಪ್ರೇಮಿ ರಾಘವೇಂದ್ರ ಭಟ್ಟ ಭಾವಿಕೇರಿ ಹೇಳಿದ್ದಾರೆ.