March 30, 2026
Monday, March 30, 2026
spot_img

ಹೊಟೇಲ್ ಗಳಿಗೆ ನಾಳೆ 17,500 ಹೆಚ್ಚುವರಿ ಗ್ಯಾಸ್ ಸಿಲಿಂಡರ್ ವಿತರಣೆ: ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಭರವಸೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರದ ಹೊಟೇಲ್ ಗಳಿಗೆ ನಾಳೆ 17,500 ಹೆಚ್ಚುವರಿ ಗ್ಯಾಸ್ ಸಿಲಿಂಡರ್‌ಗಳನ್ನು ವಿತರಿಸಲಾಗುವುದು ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಘೋಷಿಸಿದ್ದಾರೆ.


ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ವಿತರಕರಿಗೆ ಈ ಸಿಲಿಂಡರ್‌ಗಳು ತಲುಪುತ್ತಿದ್ದು, ನಾಳೆಯಿಂದಲೇ ಹೊಟೇಲ್ ಮಾಲೀಕರಿಗೆ ವಿತರಣೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.


ಸಿಲಿಂಡರ್‌ಗಳ ಪೂರೈಕೆಯಲ್ಲಿ ವ್ಯತ್ಯಯವಾಗುವ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಗೃಹ ಬಳಕೆ ಸಿಲಿಂಡರ್‌ಗಳ ವಿತರಣೆ ಕುರಿತು ಮಾಹಿತಿ ನೀಡಿದ ಸಚಿವರು, ನಗರ ಪ್ರದೇಶಗಳಲ್ಲಿ 25 ದಿನ ಕಳೆದ ಮೇಲೆ ಹಾಗೂ ಗ್ರಾಮೀಣ ಭಾಗದಲ್ಲಿ 45 ದಿನಗಳ ಅಂತರದಲ್ಲಿ ಸಿಲಿಂಡರ್ ನೀಡಲು ಗ್ಯಾಸ್ ಏಜೆನ್ಸಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.


ಒಂದು ವೇಳೆ ಗ್ಯಾಸ್ ಏಜೆನ್ಸಿಗಳು ಸಿಲಿಂಡರ್ ಬುಕ್ಕಿಂಗ್ ಪಡೆಯಲು ನಿರಾಕರಿಸಿದರೆ ಅಥವಾ ವಿಳಂಬ ಮಾಡಿದರೆ, ಗ್ರಾಹಕರು ನೇರವಾಗಿ ಸಂಬಂಧಪಟ್ಟ ಕಂಪನಿಗಳಿಗೆ ದೂರು ನೀಡಬಹುದು ಎಂದು ಅವರು ಸಲಹೆ ನೀಡಿದರು. ಇಂಧನ ಭದ್ರತೆ ಮತ್ತು ಸುಗಮ ಪೂರೈಕೆಯನ್ನು ಖಚಿತಪಡಿಸಲು ಸರ್ಕಾರವು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !