ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿ ಜಿಲ್ಲೆಯ ಭೂತರಾಮನಹಟ್ಟಿಯ ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಏಕಾಏಕಿ 19 ಜಿಂಕೆಗಳು ಅಸಹಜವಾಗಿ ಸತ್ತಿರುವ ಘಟನೆ ಆತಂಕ ಮೂಡಿಸಿದೆ. ಮೃಗಾಲಯದ ಬೆಳಗಿನ ಕಾರ್ಯಾಚರಣೆ ವೇಳೆ ಜಿಂಕೆಗಳ ಗುಂಪು ಸಾವನ್ನಪ್ಪಿರುವುದು ಕಂಡುಬಂದಿದೆ. ಈ ಘಟನೆಯ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಪ್ರಕರಣದ ಮೂಲವನ್ನು ಪತ್ತೆಹಚ್ಚಲು ತಕ್ಷಣವೇ ತನಿಖೆಗೆ ಆದೇಶಿಸಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಜಿಂಕೆಗಳು ಸಾಂಕ್ರಾಮಿಕ ಕಾಯಿಲೆಯ ಲಕ್ಷಣಗಳೊಂದಿಗೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಮೃಗಾಲಯದ ಉಳಿದ ಪ್ರಾಣಿಗಳಿಗೆ ಸೋಂಕು ಹರಡದಂತೆ ತಕ್ಷಣ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲು ಸಚಿವರು ಸೂಚಿಸಿದ್ದಾರೆ.
ಜೊತೆಗೆ, ಈ ವಿಷಾದನೀಯ ಸಾವಿಗೆ ಕಲುಷಿತ ನೀರು ಅಥವಾ ಆಹಾರವೇ ಕಾರಣವೋ, ಬೇರೆ ಸಾಕು ಪ್ರಾಣಿಗಳಿಂದ ಸೋಂಕು ಹರಡಿದೆಯೋ ಎಂಬುದನ್ನು ಪರಿಶೀಲಿಸಲು ತಜ್ಞರ ಸಮಿತಿಯನ್ನು ರಚಿಸಲಾಗಿದೆ.

