ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ 19 ವರ್ಷದ ಯುವಕನನ್ನು ಜಮ್ಮು ಪೊಲೀಸರು ಬಂಧಿಸಿದ್ದಾರೆ. ಜಮ್ಮುವಿನ ರಿಯಾಸಿ ನಿವಾಸಿಯಾಗಿರುವ ಶಂಕಿತ ಆರೋಪಿಯನ್ನು ಬಂಧಿಸಿದರು. ಆತನ ಗುರುತನ್ನು ಪೊಲೀಸರು ಹೊರ ಬಿಟ್ಟಿಲ್ಲ.
ಪ್ರಾಥಮಿಕ ತನಿಖೆಯಲ್ಲಿ, ಆತ ಸಾಮಾಜಿಕ ಮಾಧ್ಯಮದಲ್ಲಿ ಮೂಲಭೂತವಾದಿಯಾಗಿ ಬೆಳೆದಿದ್ದು, ಭಯೋತ್ಪಾದಕ ಕೃತ್ಯ ನಡೆಸಲು ಯೋಜನೆ ರೂಪಿಸುತ್ತಿದ್ದ ಎಂದು ತಿಳಿದುಬಂದಿದೆ. ಪಾಕಿಸ್ತಾನ ಮತ್ತು ಇತರ ವಿದೇಶಗಳಲ್ಲಿರುವ ಹ್ಯಾಂಡ್ಲರ್‌ಗಳೊಂದಿಗೆ ಮೊಬೈಲ್ ಫೋನ್ ಮೂಲಕ ಸಂಪರ್ಕದಲ್ಲಿದ್ದ ಎಂದು ತಿಳಿದುಬಂದಿದೆ.
ಬಹು ಫೋರ್ಟ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 113(3) (ಭಯೋತ್ಪಾದಕ ಚಟುವಟಿಕೆ) ಅಡಿಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಅವನನ್ನು ಬಂಧಿಸಲಾಗಿದೆ. ಆತನ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳನ್ನು ಕೂಲಂಕುಷವಾಗಿ ಪರಿಶೀಲಿಸಲಾಗುತ್ತಿದೆ. ಇನ್ನು ಈ ಸಂಬಂಧ ಆರೋಪಿಯ ಬಗ್ಗೆ ವಿವರವಾದ ವಿಚಾರಣೆ ಮತ್ತು ಸಂಪೂರ್ಣ ತನಿಖೆ ನಡೆಯುತ್ತಿದೆ.

