ಹೊಸದಿಗಂತ ಡಿಜಿಟಲ್ ಡೆಸ್ಕ್:
1984ರ ಸಿಖ್ ವಿರೋಧಿ ದಂಗೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮಹತ್ವದ ತೀರ್ಪು ಹೊರಬಿದ್ದಿದೆ. ಜನಕ್‌ಪುರಿ ಮತ್ತು ವಿಕಾಸ್‌ಪುರಿ ಪ್ರದೇಶಗಳಲ್ಲಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪಕ್ಕೆ ಸಂಬಂಧಿಸಿ, ದೆಹಲಿ ನ್ಯಾಯಾಲಯ ಕಾಂಗ್ರೆಸ್‌ನ ಮಾಜಿ ಸಂಸದ ಸಜ್ಜನ್ ಕುಮಾರ್ ಅವರನ್ನು ಖುಲಾಸೆಗೊಳಿಸಿದೆ.
ಈ ಪ್ರಕರಣವು 2015ರಲ್ಲಿ ವಿಶೇಷ ತನಿಖಾ ತಂಡ ದಾಖಲಿಸಿದ ಎರಡು ಎಫ್‌ಐಆರ್‌ಗಳಿಂದ ಉದ್ಭವಿಸಿತ್ತು. ಮೊದಲ ಪ್ರಕರಣದಲ್ಲಿ ಜನಕ್‌ಪುರಿಯಲ್ಲಿ ಸೋಹನ್ ಸಿಂಗ್ ಮತ್ತು ಅವರ ಅಳಿಯ ಅವತಾರ್ ಸಿಂಗ್ ಹತ್ಯೆ ಆರೋಪ ಇದ್ದರೆ, ಎರಡನೇ ಪ್ರಕರಣದಲ್ಲಿ ವಿಕಾಸ್‌ಪುರಿಯಲ್ಲಿ ನಡೆದ ಬೆಂಕಿ ಹಚ್ಚುವ ಘಟನೆಯಲ್ಲಿ ಗುರುಚರಣ್ ಸಿಂಗ್ ಸಾವಿನ ಬಗ್ಗೆ ಉಲ್ಲೇಖಿಸಲಾಗಿತ್ತು. 2023ರ ಆಗಸ್ಟ್‌ನಲ್ಲಿ ನ್ಯಾಯಾಲಯ ಗಲಭೆ ಮತ್ತು ದ್ವೇಷ ಪ್ರಚೋದನೆ ಆರೋಪಗಳನ್ನು ಮಾತ್ರ ಮುಂದುವರಿಸಿ, ಕೊಲೆ ಹಾಗೂ ಕ್ರಿಮಿನಲ್ ಪಿತೂರಿ ಆರೋಪಗಳನ್ನು ಕೈಬಿಟ್ಟಿತ್ತು.
ಈ ಪ್ರಕರಣದಲ್ಲಿ ಖುಲಾಸೆಯಾದರೂ ಸಜ್ಜನ್ ಕುಮಾರ್ ಜೈಲಲ್ಲೇ ಮುಂದುವರಿಯುತ್ತಾರೆ. ಸರಸ್ವತಿ ವಿಹಾರ್ ಗಲಭೆ ಪ್ರಕರಣದಲ್ಲಿ ಜಸ್ವಂತ್ ಸಿಂಗ್ ಮತ್ತು ಅವರ ಪುತ್ರ ತರುಣದೀಪ್ ಸಿಂಗ್ ಹತ್ಯೆಗೆ ಸಂಬಂಧಿಸಿದಂತೆ ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದಕ್ಕೂ ಮೊದಲು, ದೆಹಲಿ ಹೈಕೋರ್ಟ್ ಕೂಡ ಪಾಲಂ ಕಾಲೋನಿಯ ದಂಗೆ ಪ್ರಕರಣದಲ್ಲಿ ಐದು ಸಾವುಗಳಿಗೆ ಸಂಬಂಧಿಸಿ ಜೀವಾವಧಿ ಶಿಕ್ಷೆಯನ್ನು ದೃಢಪಡಿಸಿತ್ತು.
ನಾನಾವತಿ ಆಯೋಗದ ವರದಿ ಪ್ರಕಾರ, 1984ರ ದಂಗೆಯಲ್ಲಿ ದೆಹಲಿಯಲ್ಲಿ ಸಾವಿರಾರು ಜನರು ಬಲಿಯಾಗಿದ್ದು, ಕೆಲವೇ ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ವಿಧಿಸಲಾಗಿತ್ತು.


