ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಸ್ಸಾಂನ ಧೇಮಾಜಿ ಜಿಲ್ಲೆಯ ಅರುಣಾಚಲ ಪ್ರದೇಶದ ಗಡಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿ, ಇನ್ನು ಮೂವರು ನಾಪತ್ತೆಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಎಸ್ಪಿ ರಂಜನ್ ಭುಯಾನ್, ವಿಶ್ವ ಪರಿಸರ ದಿನಾಚರಣೆಯ ನಿಮಿತ್ತ ಸ್ಥಳೀಯರು ಅಂತಾರಾಜ್ಯ ಗಡಿ ಪ್ರದೇಶದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅದರ ಸಿದ್ಧತೆಗಾಗಿ ಏಳು ಗ್ರಾಮಸ್ಥರು ಸ್ಥಳಕ್ಕೆ ತಲುಪಿದ ವೇಳೆ ಅನಾಮಧೇಯ ವ್ಯಕ್ತಿಗಳು ಗುಂಡು ಹಾರಿಸಿದ್ದಾರೆ. ಈ ಗುಂಡಿನ ದಾಳಿಯಲ್ಲಿ ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕಿತ್ಸೆ ವೇಳೆ ಮತ್ತೊಬ್ಬ ವ್ಯಕ್ತಿ ಕೊನೆಯುಸಿರೆಳೆದಿದ್ದಾರೆ.
ಇನ್ನು ಮೂವರು ನಾಪತ್ತೆಯಾಗಿದ್ದು, ಅವರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ. ಮಾಹಿತಿ ಪಡೆದ ನಮ್ಮ ತಂಡವು ಸ್ಥಳಕ್ಕೆ ಧಾವಿಸಿದ್ದು, ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ. ಈ ಪ್ರದೇಶದಲ್ಲಿ ಅಂತರರಾಜ್ಯ ಗಡಿ ವಿವಾದ ಇರುವುದರಿಂದ ಅರುಣಾಚಲ ಪ್ರದೇಶದ ಕೆಲವರ ಕೈವಾಡವಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಸ್ಸಾಂ – ಅರುಣಾಚಲ ಪ್ರದೇಶ 804-ಕಿಮೀ ಉದ್ದದ ಗಡಿಯನ್ನು ಹಂಚಿಕೊಂಡಿದೆ. ಗಡಿ ವಿವಾದಗಳನ್ನು ಬಗೆಹರಿಸಲು ಎರಡೂ ಕಡೆಯವರು ಮಾತುಕತೆ ನಡೆಸುತ್ತಿದ್ದಾರೆ.
ಏಪ್ರಿಲ್ 20 ರಂದು ನವದೆಹಲಿಯಲ್ಲಿ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಅರುಣಾಚಲ ಮುಖ್ಯಮಂತ್ರಿ ಪೆಮಾ ಖಂಡು ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ಗಡಿ ರೇಖೆಯನ್ನು ಇತ್ಯರ್ಥಗೊಳಿಸಲು ಎಂಒಯುಗೆ ಸಹಿ ಹಾಕಿದರು. ಗಡಿ ವಿವಾದಗಳನ್ನು ಪರಿಹರಿಸುವ ಪ್ರಯತ್ನಗಳಿಗೆ ಉತ್ತೇಜನ ನೀಡಲು ಉಭಯ ಮುಖ್ಯಮಂತ್ರಿಗಳು ಕಳೆದ ವರ್ಷ ಜುಲೈನಲ್ಲಿ ನಮಸಾಯಿ ಘೋಷಣೆಗೆ ಸಹಿ ಹಾಕಿದರು. ಅರುಣಾಚಲ ಪ್ರದೇಶವು 1972 ರಲ್ಲಿ ಕೇಂದ್ರಾಡಳಿತ ಪ್ರದೇಶವಾಗಿ ಮತ್ತು 1987 ರಲ್ಲಿ ರಾಜ್ಯವಾಗಿ ಘೋಷಣೆಯಾಯಿತು.