ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಐಟಿಸಿ ರಸ್ತೆಯ ಸುಬ್ಬಣ್ಣಪಾಳ್ಯದಲ್ಲಿ ಸೋಮವಾರ ಸಂಜೆ ಪಿಟ್‌ಬುಲ್ ದಾಳಿಗೆ ಎರಡು ವರ್ಷದ ಬಾಲಕಿ ತೀವ್ರವಾಗಿ ಗಾಯಗೊಂಡಿದ್ದಾಳೆ.
ಅನುಷ್ಕಾ ಧಮಾಲ್ ಎಂಬ ಬಾಲಕಿ ತನ್ನ ತಾಯಿಯೊಂದಿಗೆ ಇದ್ದಾಗ ನೆರೆಹೊರೆಯವರ ನಾಯಿ ಆಕೆಯ ಮೇಲೆ ದಾಳಿ ಮಾಡಿ, ಆಕೆಯ ಭುಜವನ್ನು ತೀವ್ರವಾಗಿ ಕಚ್ಚಿದೆ. ಬಾಲಕಿಯ ತಾಯಿ ನಾಯಿಯನ್ನು ದೂರ ತಳ್ಳಿ ಮಗಳನ್ನು ರಕ್ಷಿಸಲು ಹರಸಾಹಸ ಪಟ್ಟಿದ್ದಾರೆ ಎನ್ನಲಾಗಿದೆ.
ಸುಬ್ಬಣ್ಣಪಾಳ್ಯದ ವೆಂಕಟೇಶ್ವರ ಲೇಔಟ್ ನಿವಾಸಿಯಾಗಿರುವ ಬಾಲಕಿಯ ತಂದೆ ನಬರಾಜ್ ಧಮಾಲ್ ಅವರು ನಾಯಿಯ ಮಾಲೀಕರ ವಿರುದ್ಧ ಮರುದಿನ ದೂರು ದಾಖಲಿಸಿದ್ದಾರೆ. ಎರಡು ತಿಂಗಳ ಹಿಂದಷ್ಟೇ ನಬರಾಜ್ ಕುಟುಂಬ ನೇಪಾಳದಿಂದ ನಗರಕ್ಕೆ ಆಗಮಿಸಿತ್ತು. ನಬರಾಜ್ ಮತ್ತು ಅವರ ಪತ್ನಿ ಹತ್ತಿರದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದು ಅನುಷ್ಕಾ ಜೊತೆಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಚಿಕಿತ್ಸೆ ವೆಚ್ಚವನ್ನು ನಾಯಿ ಮಾಲೀಕರು ನೋಡಿಕೊಳ್ಳದ ಕಾರಣ ನಬರಾಜ್ ಪೊಲೀಸ್ ದೂರು ದಾಖಲಿಸಿದ್ದಾರೆ. ಬಾಲಕಿ ಅಪಾಯದಿಂದ ಪಾರಾಗಿದ್ದಾಳೆ ಎಂದು ಹೇಳಲಾಗಿದೆ. ಆಕೆ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾಳೆ. ನಾಯಿ ಮಾಲೀಕರನ್ನು ವಿಚಾರಣೆಗೆ ಕರೆಸಲಾಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ನಾಯಿ ಮಾಲೀಕರ ವಿರುದ್ಧ ಪ್ರಾಣಿಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವರ್ತನೆಯ ಪ್ರಕರಣವನ್ನು ದಾಖಲಿಸಲಾಗಿದೆ. ಹೆಚ್ಚಿನ ತನಿಖೆಗಳು ನಡೆಯುತ್ತಿವೆ.