ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿದ 20 ಮಕ್ಕಳು: ಮೀನು ಕಾರ್ಮಿಕರಿಂದ ರಕ್ಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಸರಗೋಡು ನಗರದ ಕಸಬಾ ಕಡಪ್ಪುರದಲ್ಲಿ ಸ್ನಾನಕ್ಕಿಳಿದ ಸುಮಾರು ೨೦ರಷ್ಟು ಮಂದಿ ಮಕ್ಕಳು ಸಮುದ್ರದ ಬೃಹತ್ ಅಲೆಗಳಿಗೆ ಸಿಲುಕಿ ಆಳ ಸಮುದ್ರದತ್ತ ಒಯ್ಯಲ್ಪಟ್ಟ ಘಟನೆ ನಡೆದಿದೆ. ವಿಷಯ ತಿಳಿದು ಮೀನು ಕಾರ್ಮಿಕರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಿಂದ ಮಕ್ಕಳನ್ನು ಅಪಾಯದಿಂದ ಪಾರು ಮಾಡಲಾಯಿತು.

ಶ್ರೀ ಅಯ್ಯಪ್ಪ ದೀಪೋತ್ಸವಕ್ಕೆಂದು ಕಾಸರಗೋಡು ಕಸಬಾ ಕಡಪ್ಪುರಕ್ಕೆ ಆಗಮಿಸಿದ್ದ ೧೨, ೧೩, ೧೪ರ ಹರೆಯದ ಸುಮಾರು ೨೦ರಷ್ಟು ಮಂದಿ ಮಕ್ಕಳು ಸೋಮವಾರ ಬೆಳಗ್ಗೆ ಸಮುದ್ರ ಕಿನಾರೆಗೆ ಬಂದಿದ್ದರು. ಬಳಿಕ ಮೀನು ಕಾರ್ಮಿಕರು ಬಳಸುವ ಕ್ಯಾನ್‌ಗಳನ್ನು ದೇಹಕ್ಕೆ ಕಟ್ಟಿ ಅವರು ಸಮುದ್ರಕ್ಕಿಳಿದರು. ಆದರೆ ಅದೇ ಹೊತ್ತಿನಲ್ಲಿ ಅಪ್ಪಳಿಸಿದ ಬೃಹದಾಕಾರದ ಅಲೆಗಳು ಮಕ್ಕಳನ್ನು ಎಳೆದೊಯ್ದಿವೆ.

ಸಮುದ್ರದಲ್ಲಿ ಮಕ್ಕಳು ಮುಳುಗೇಳುತ್ತಿರುವುದನ್ನು ಗಮನಿಸಿದ ಪರಿಸರದ ಮೀನು ಕಾರ್ಮಿಕರಾದ ಕೆ.ಬಾಬು, ಪುಷ್ಪಾಕರನ್, ಚಿತ್ರಕಾರನ್, ಹರೀಶ್ ಅವರು ತಕ್ಷಣ ಸಮುದ್ರಕ್ಕೆ ಹಾರಿ ಸತತ ಪ್ರಯತ್ನದ ಮೂಲಕ ಹರಸಾಹಸದಿಂದ ಮಕ್ಕಳನ್ನು ದಡಕ್ಕೆ ತಲುಪಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಮಕ್ಕಳು ಭಾರೀ ಅಪಾಯದಿಂದ ಪಾರಾದರು.

ಈ ಮಧ್ಯೆ ಮಕ್ಕಳು ಸಮುದ್ರದಲ್ಲಿ ಸಿಲುಕಿಕೊಂಡಿರುವ ಬಗ್ಗೆ ಮಾಹಿತಿ ತಿಳಿದು ಕಾಸರಗೋಡು ನಗರ ಠಾಣೆ ಪೊಲೀಸರು, ಅಗ್ನಿಶಾಮಕ ದಳದವರು ಹಾಗೂ ಹಲವಾರು ಮಂದಿ ಸಮುದ್ರದತ್ತ ಧಾವಿಸಿ ಬಂದಿದ್ದರು. ಆದರೆ ಅಷ್ಟರೊಳಗೆ ಮಕ್ಕಳನ್ನು ಅಪಾಯದಿಂದ ರಕ್ಷಿಸಲಾಗಿತ್ತು. ಬಳಿಕ ಕಾಸರಗೋಡು ಪೊಲೀಸರು ಮತ್ತು ಅಗ್ನಿಶಾಮಕ ದಳದ ಅಕಾರಿಗಳು ಮಕ್ಕಳಿಗೆ ಬುದ್ಧಿಮಾತುಗಳನ್ನು ತಿಳಿಸಿ ಮನೆಗೆ ಕಳುಹಿಸಿಕೊಟ್ಟರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!