ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಳವೆ ಬಾವಿಗೆ ಬಿದ್ದಿರುವ 2 ವರ್ಷದ ಕಂದ ಸಾತ್ವಿಕ್ನನ್ನು ಕೊನೆಗೂ ರಕ್ಷಣಾ ಪಡೆಯ ಸಿಬ್ಬಂದಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇಂಡಿಯ ಲಚ್ಯಾನ ಗ್ರಾಮದ ತೋಟದಲ್ಲಿ ಆಟವಾಡುತ್ತಿದ್ದಾಗ ಮಗು ಕೊಳವೆ ಬಾವಿಗೆ ಬಿದ್ದಿತ್ತು. ಈ ಸಂಬಂಧ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ತಂಡಗಳು ನಿನ್ನೆಯಿಂದಲೇ ರಕ್ಷಣಾ ಕಾರ್ಯಾಚರಣೆ ನಡೆಸಿ ಸಾತ್ವಿಕ್ನನ್ನು ಹೊರಗೆ ತೆಗಿದಿದ್ದಾರೆ. ಇದರಿಂದ ಮಗುವಿನ ಪೋಷಕರು, ಸಂಬಂಧಿಗಳು ಹಾಗೂ ಗ್ರಾಮಸ್ಥರೆಲ್ಲರೂ ಸಂತಸದಲ್ಲಿದ್ದಾರೆ.
ಗ್ರಾಮದ ಆರಾಧ್ಯ ದೈವ ಸಿದ್ಧಲಿಂಗ ಮಹಾರಾಜರ ಆರ್ಶಿರ್ವಾದದಿಂದ ಬಾಲಕ ಸಾತ್ವಿಕ ಬದುಕುಳಿದಿದ್ದು, ನಾಡಿನ ಜನರ ಪ್ರಾರ್ಥನೆ ಫಲಿಸಿತು ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.
ಬುಧವಾರ ಸಂಜೆ 5 ಗಂಟೆ ಆಟವಾಡಲು ಹೋದ ವೇಳೆ ತೆರೆದ ಕೊಳವೆ ಬಾವಿಗೆ ಬಿದ್ದ ಬಾಲಕ ಜೀವನ್ಮರಣದಲ್ಲಿ ಹೋರಾಟ ನಡೆಸಿದ್ದು, ನಿರಂತರ 20 ಗಂಟೆಯ ಕಾರ್ಯಾಚರಣೆ ನಡೆಸಲಾಗಿದ್ದು, ಕಾರ್ಯಾಚರಣೆ ಯಶಸ್ವಿಯಾಗಿದ್ದಕ್ಕೆ ಜಿಲ್ಲಾಡಳಿತದ ಅಧಿಕಾರಿಗಳು, ಕಾರ್ಯಾಚರಣೆ ನಡೆಸಿದ ತಂಡ ನಿಟ್ಟುಸಿರು ಬಿಟ್ಟಿದೆ.
ಇಂಡಿ ತಾಲೂಕಿನ ಲಚ್ಯಾನ ಗ್ರಾಮದ ತೋಟದಲ್ಲಿ ನಿನ್ನೆ ಸಂಜೆಯಿಂದ ನಿರಂತರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿತ್ತು. ನಿರಂತರ 12 ಗಂಟೆಯ ಡ್ರಿಲ್ಲಿಂಗ್ ಕಾರ್ಯದ ಬಳಿಕ ಕೊಳವೆ ಬಾವಿಯಲ್ಲಿ ಮಗು ಅಳುವ ಶಬ್ಧ ಕೇಳಿತ್ತು. ಇದೀಗ ಬಾಲಕನ ತಲೆ ಕಾಣುವ ಮೂಲಕ ಸಾತ್ವಿಕ್ ಆರೋಗ್ಯವಾಗಿದ್ದಾನೆ ಅನ್ನೋದು ಖಚಿತವಾಗಿದೆ. ರಕ್ಷಣಾ ಕಾರ್ಯದಲ್ಲಿ ನಿರತರವಾಗಿರುವ ಸಿಬ್ಬಂದಿಗಳು ನಮ್ಮ ಪರಿಶ್ರಮಕ್ಕೆ ಜಯ ಸಿಗುತ್ತಿದ್ದಂತೆ ಸಂಭ್ರಮ ಆಚರಿಸಿದ್ದಾರೆ.