20 ಲಕ್ಷ ಕೋಟಿ ಹಗರಣದಲ್ಲಿ ಭಾಗಿಯಾದವರು ಪಾಟ್ನಾದಲ್ಲಿ ಸಭೆ ಸೇರಿದರು: ವಿಪಕ್ಷಗಳ ವಿರುದ್ಧ ಅಮಿತ್ ಶಾ ವಾಗ್ದಾಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಪಾಟ್ನಾದಲ್ಲಿ ನಡೆದ ವಿಪಕ್ಷಗಳ ಸಭೆಯಲ್ಲಿ ಭಾಗವಹಿಸಿದ್ದ ನಾಯಕರು 20 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಗರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಅಮಿತ್ ಶಾ (Amit Shah) ಗುರುವಾರ ಆರೋಪಿಸಿದ್ದಾರೆ.

ಮುಂಗೇರ್ ಸಂಸದೀಯ ಕ್ಷೇತ್ರದ ಲಖಿಸಾರೈನಲ್ಲಿ ಬಿಜೆಪಿ ಆಯೋಜಿಸಿದ್ದ ಮೆಗಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಹಾರ (Bihar) ಮುಖ್ಯಮಂತ್ರಿ ನಿತೀಶ್ ಕುಮಾರ್​​​ನ್ನು (Nitish Kumar) ತರಾಟೆಗೆ ತೆಗೆದುಕೊಂಡರು.

ಬಿಹಾರ ಯಾವಾಗಲೂ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತುತ್ತದೆ. ಜೂನ್ 23 ರಂದು ಪಾಟ್ನಾದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿದ ವಿರೋಧ ಪಕ್ಷದ ನಾಯಕರು 20 ಲಕ್ಷ ಕೋಟಿ ರೂಪಾಯಿಗಳ ಹಗರಣಗಳಲ್ಲಿ ಭಾಗಿಯಾಗಿದ್ದಾರೆ. 2024 ರ ಲೋಕಸಭೆ ಚುನಾವಣೆಯಲ್ಲಿ ಭ್ರಷ್ಟ ನಾಯಕರಿಗೆ ಬಿಹಾರ ತಕ್ಕ ಪ್ರತ್ಯುತ್ತರ ನೀಡಲಿದೆ ಎಂದು ಹೇಳಿದ್ದಾರೆ.

ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟವನ್ನು ಕೈಬಿಟ್ಟ ನಾಯಕರನ್ನು ಶಿಕ್ಷಿಸಬೇಕು ಎಂದು ಹೇಳಿದ್ದಾರೆ.

ನಿತೀಶ್ ಬಾಬು ಬಿಹಾರಕ್ಕಾಗಿ ಏನು ಮಾಡಿದ್ದಾರೆ ಎಂಬುದನ್ನು ವಿವರಿಸಬೇಕು. ರಾಜ್ಯದಲ್ಲಿ ‘ಮಹಾಘಟಬಂಧನ್’ ಸರ್ಕಾರದ ಅಡಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಮತ್ತೊಂದೆಡೆ, ಕೇಂದ್ರದಲ್ಲಿ ಒಂಬತ್ತು ವರ್ಷಗಳ ಎನ್‌ಡಿಎ ಆಡಳಿತದ ಅವಧಿಯಲ್ಲಿ ರಾಜ್ಯವು ವೈದ್ಯಕೀಯ ಕಾಲೇಜುಗಳು, ಎಕ್ಸ್‌ಪ್ರೆಸ್‌ವೇಗಳು, ಸೇತುವೆಗಳು, ಹೊಸ ರೈಲು ಹಳಿಗಳು, 130 ಮೆಗಾವ್ಯಾಟ್ ಶಾಖೋತ್ಪನ್ನ ವಿದ್ಯುತ್ ಸ್ಥಾವರ ಸೇರಿದಂತೆ ಹಲವಾರು ಪ್ರಮುಖ ಮೂಲಸೌಕರ್ಯ ಯೋಜನೆಗಳಿಗೆ ಚಾಲನೆ ನೀಡಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರ ಒಂಬತ್ತು ವರ್ಷಗಳಲ್ಲಿ ಏನು ಮಾಡಿದ್ದೀರಿ ಎಂದು ಬಾಬು ನಿತೀಶ್ ಕುಮಾರ್ ಅವರು ಕೇಳುತ್ತಿದ್ದರು. ಮೊದಲು ನೀವು ಯಾರೊಂದಿಗೆ ಅಧಿಕಾರವನ್ನು ಹಂಚಿಕೊಂಡಿದ್ದೀರಿ ಮತ್ತು ಯಾರಿಂದಾಗಿ ನೀವು ಮುಖ್ಯಮಂತ್ರಿಯಾಗಿದ್ದೀರೋ ಅವರ ಬಗ್ಗೆ ಸ್ವಲ್ಪವಾದರೂ ಕಾಳಜಿ ವಹಿಸಿ. ಪ್ರಧಾನಿ ಮೋದಿಯವರು ಸಾಕಷ್ಟು ಕೆಲಸ ಮಾಡಿದ್ದಾರೆ ಎಂದು ಶಾ ಹೇಳಿದ್ದಾರೆ.

ಈ ಒಂಬತ್ತು ವರ್ಷಗಳು ಭಾರತದ ವೈಭವದ ವರ್ಷ. ಪ್ರಧಾನಿ ಮೋದಿ ಎಲ್ಲಿಗೆ ಹೋದರೂ ಅದು ಅಮೆರಿಕ ಅಥವಾ ಇಂಗ್ಲೆಂಡ್ ಅಥವಾ ಫ್ರಾನ್ಸ್ ಅಥವಾ ಈಜಿಪ್ಟ್ ಆಗಿರಲಿ – ನೀವು ಮೋದಿ ಪರ ಘೋಷಣೆಗಳನ್ನು ಕೇಳುತ್ತೀರಿ. ಅವರು ಇತ್ತೀಚೆಗೆ ಅಮೆರಿಕಕ್ಕೆ ಹೋಗಿದ್ದರು, ಕೆಲವು ರಾಷ್ಟ್ರಗಳ ಮುಖ್ಯಸ್ಥರು ಅವರೊಂದಿಗೆ ಅಪಾಯಿಂಟ್‌ಮೆಂಟ್ ಕೇಳಿದರು, ಇನ್ನೂ ಕೆಲವರು ಅವರ ಆಟೋಗ್ರಾಫ್, ಇನ್ನೂ ಕೆಲವರು ಆಶೀರ್ವಾದಕ್ಕಾಗಿ ಅವರ ಪಾದಗಳನ್ನು ಮುಟ್ಟಿದರು. ವಿಶ್ವದಾದ್ಯಂತ ಪ್ರಧಾನಿ ಮೋದಿಯವರಿಗೆ ಸಿಗುವ ಈ ಗೌರವ ಅವರ ಅಥವಾ ಬಿಜೆಪಿಯದ್ದು ಮಾತ್ರವಲ್ಲ. ಕೋಟಿಗಟ್ಟಲೆ ಭಾರತೀಯರದ್ದು ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!