ವರುಣನ ಅಬ್ಬರಕ್ಕೆ 200 ಕೃಷಿ ಹೊಂಡಗಳು ಭರ್ತಿ: ರೈತರಲ್ಲಿ ಮೂಡಿದ ಮಂದಹಾಸ

ಮಹಾಂತೇಶ ಕಣವಿ

ಧಾರವಾಡ: ರಾಜ್ಯದಲ್ಲಿ ಹೆಚ್ಚು ಕೃಷಿ ಹೊಂಡ ಹೊಂದಿದ ಖ್ಯಾತಿ ಧಾರವಾಡ ಜಿಲ್ಲೆಗೆ ಇದೆ. ಇದೀಗ ಕಳೆದ ಹತ್ತು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದ ಜಿಲ್ಲೆಯ ಕೃಷಿ ಹೊಂಡಗಳು, ಕೆರೆಗಳು, ಚೆಕ್‌ ಡ್ಯಾಂ ಭರ್ತಿಯಾಗಿ, ಜಲ ಸಂಭ್ರಮಕ್ಕೆ ನಾಂದಿ ಹಾಡಿದೆ.

ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಗದಗ, ಹಾವೇರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವರುಣನ ಆರ್ಭಟ ನಿಲ್ಲುತ್ತಿಲ್ಲ. ಜಿಲ್ಲೆಯಲ್ಲಿ ಜು.1 ರಿಂದ ಜು.25ರ ವರೆಗೂ 121 ಮಿ.ಮೀ. ವಾಡಿಕೆ ಮಳೆ ನಿರೀಕ್ಷೆ ಇತ್ತು. ಆದರೆವಾಸ್ತವದಲ್ಲಿ 201 ಮಿ.ಮೀ ಮಳೆ ಸುರಿದಿದೆ.

ಸಕಾಲಕ್ಕೆ ಮಳೆ ಬಾರದೆ, ಬರಗಾಲ ಛಾಯೆಗೆ ಅನೇಕ ಹಳ್ಳಿಗಳು ಕುಡಿಯುವ ನೀರಿನ ಹಾಹಾಕಾರ ಅನುಭವಿಸುತ್ತಿದ್ದವು. ಮಳೆಯಿಂದಾಗಿ ಕೆರೆಗಳು ತುಂಬಿ ತುಳುಕುತ್ತಿವೆ. ನೀರಿನ ಬಾಧೆ ಎದುರಿಸುವ ಹಳ್ಳಿಗಳ ಜನ- ಜಾನುವಾರು ಮತ್ತು ಕಾಡು ಪ್ರಾಣಿಗಳಿಗೆ ಅನುಕೂಲವಾಗಿದೆ.

2014-15, 2015-16ರಲ್ಲಿ ಕೃಷಿ ಇಲಾಖೆಯ ಮೂಲಕ ಜಿಲ್ಲೆಯ ರೈತರು ತಮ್ಮ ಜಮೀನುಗಳಲ್ಲಿ 250ಕ್ಕೂ ಹೆಚ್ಚು ಕೃಷಿ ಹೊಂಡ, ಕೆರೆಕಟ್ಟೆ ಹಾಗೂ ಚೆಕ್ ಡ್ಯಾಂ ನಿರ್ಮಿಸಿಕೊಂಡಿದ್ದರು. ನೀರಿಲ್ಲದೆ ಬತ್ತಿ ಹೋಗಿದ್ದ ಅವುಗಳಿಗೀಗ ಜೀವಕಳೆ ಮರುಕಳಿಸಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸಲಷ್ಟೇ ಸೀಮಿತವಾಗಿಲ್ಲ. ಜೊತೆಗೆ ಕೃಷಿಗೆ ಪೂರಕ ವಾತಾವರಣ ಸೃಷ್ಟಿಸುವ ಮೂಲಕ ರೈತ ಸಮೂಹದ ಬಾಳಿಗೆ ಹಾಗೂ ಜನ- ಜನಾನುವಾರುಗಳಿಗೂ ಆಶಾಕಿರಣವಾಗಿದೆ.

ಸಾವಿರಾರು ಅಡಿ ಕೊಳವೆ ಬಾವಿ ಕೊರೆದರೂ, ನೀರು ಸಿಗುವುದು ಕಷ್ಟಕರ. ಕೊಳವೆ ಬಾವಿಗಳು, ಕೃಷಿ ಹೊಂಡ ಬತ್ತಿ ಹೋಗಿದ್ದವು. ಬತ್ತಿಹೋದ ಕೊಳವೆ ಬಾವಿಗಳಲ್ಲಿ ಈಗ ನೀರು ಜಿನುಗುತ್ತಿದೆ. ಮಳೆಗೆ ಅಂತರ್ಜಲ ವೃದ್ಧಿಗೊಂಡಿದ್ದು, ರೈತರಲ್ಲಿ ಮಂದಹಾಸ ಮೂಡಿಸಿದೆ.

ಖಾತ್ರಿ ಯೋಜನೆಯಲ್ಲಿ ನೈಯಾ ಪೈಸೆ ಖರ್ಚಿಲ್ಲದೇ ಕೃಷಿ ಹೊಂಡ ನಿರ್ಮಿಸಿಕೊಂಡ ರೈತರಿಗೆ ಅನುಕೂಲವಾಗಿದೆ. ಭರ್ತಿಯಾದ ಕೃಷಿ ಹೊಂಡಗಳಿಂದ ಬೇಸಿಗೆಯಲ್ಲೂ ತೋಟಗಾರಿಕೆ ಕೃಷಿ ಚಟುವಟಿಕೆ ಮಾಡಬಹುದು. 200ಕ್ಕೂ ಅಧಿಕ ಕೃಷಿ ಹೊಂಡ ಭರ್ತಿಯಾಗಿವೆ ಎಂದು ಧಾರವಾಡ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಕಿರಣಕುಮಾರ ತಿಳಿಸಿದ್ದಾರೆ.

ಸಸ್ಯ ಹಾಗೂ ಜೀವಿ ಸಂಕುಲಕ್ಕೆ ಜೀವಕಳೆ

ನಿರಂತರವಾಗಿ ಸುರಿದ ಮಳೆಗೆ ಈ ಭಾಗದ ಬೆಣ್ಣೆಹಳ್ಳ, ತುಪ್ಪರಿಹಳ್ಳ, ಡೋರಿನಾಲಾ ಸೇರಿ ಚಿಕ್ಕಪುಟ್ಟ 23ಕ್ಕೂ ಅಧಿಕ ಹಳ್ಳಗಳು, ನೀರಸಾಗರ ಕೆರೆ, ಮುಗದ ಕೆರೆ ಸೇರಿ 1200 ಕೆರೆಗಳು ಮೈದುಂಬಿ ಹರಿಯುತ್ತಿವೆ. 150ಕ್ಕೂ ಅಧಿಕ ಚೆಕ್ ಡ್ಯಾಂ ತುಂಬಿ ತುಳುಕುತ್ತಿವೆ. ಅಲ್ಲದೇ ಕೊಳವೆ ಬಾವಿಗಳಲ್ಲಿ ನೀರು ಚಿಮ್ಮಿದೆ. ನೈಸರ್ಗಿಕ ನೀರಾವರಿ ಕಾಲುವೆಗಳಲ್ಲಿ ನೀರಿನ ಸೆಲೆಯೂ ಮರುಕಳಿಸಿದೆ. ಇದಲ್ಲದೇ ಸಸ್ಯ ಹಾಗೂ ಜೀವಿ ಸಂಕುಲಕ್ಕೆ ಜೀವಕಳೆ ಬಂದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!