ಹೊಸದಿಗಂತ ಡಿಜಿಟಲ್ ಡೆಸ್ಕ್:
ಗಾಜಾಪಟ್ಟಿಯ ಹಮಾಸ್ ಉಗ್ರರು ಸುಮಾರು 200 ಮಂದಿ ಇಸ್ರೇಲ್ ಪ್ರಜೆಗಳು ಹಾಗೂ ವಿದೇಶೀಯರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಗಾಜಾಪಟ್ಟಿಯ ಸುರಂಗ ಸಂಪರ್ಕ ವ್ಯವಸ್ಥೆ ಒಳಗೆ ರಹಸ್ಯವಾಗಿ ಅಡಗಿಸಿ ಇಟ್ಟಿದ್ದು, ಬಹುತೇಕ ಎಲ್ಲರೂ ಜೀವಂತವಾಗಿ ಇದ್ದಾರೆ ಎಂದು ಇಸ್ರೇಲ್ ಸೇನೆ ಹೇಳಿದೆ.
ಈ ಕುರಿತಾಗಿ ಶುಕ್ರವಾರ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಇಸ್ರೇಲ್ ಸೇನೆ, ಬಹುತೇಕ ಎಲ್ಲ ಒತ್ತೆಯಾಳುಗಳೂ ಜೀವಂತವಾಗಿ ಇರುವ ವಿಶ್ವಾಸ ವ್ಯಕ್ತಪಡಿಸಿದೆ. ಜೊತೆಯಲ್ಲೇ ಹಲವು ಒತ್ತೆಯಾಳುಗಳನ್ನು ಉಗ್ರರು ಹತ್ಯೆ ಮಾಡಿದ್ದು, ಅವರ ಮೃತ ದೇಹಗಳೂ ಗಾಜಾಪಟ್ಟಿಯ ಗಡಿಯಲ್ಲೇ ಇರುವ ಬಗ್ಗೆ ಶಂಕಿಸಿದೆ.
ಇಸ್ರೇಲ್ ನೆಲದ ಮೇಲೆ ದಾಳಿ ನಡೆಸಿ ವಾಪಸ್ ಹೋಗುವ ವೇಳೆ ಹಮಾಸ್ ಉಗ್ರರು ನೂರಾರು ಒತ್ತೆಯಾಳುಗಳನ್ನು ತಮ್ಮ ಜೊತೆಗೆ ಗಾಜಾಪಟ್ಟಿಗೆ ಕರೆದೊಯ್ದಿದ್ದರು. ಈ ಪೈಕಿ 20 ಮಕ್ಕಳೂ ಸೇರಿದ್ದಾರೆ ಎಂದು ಲೆಕ್ಕ ಹಾಕಲಾಗಿದೆ. ಇನ್ನು 10 ರಿಂದ 20 ಮಂದಿ 60 ವರ್ಷ ವಯಸ್ಸಿನವರು ಇರಬಹುದು ಎಂದು ಅಂದಾಜಿಸಲಾಗಿದೆ.