ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಸ್ಟ್ರಿಯಾದಲ್ಲಿ ಪ್ಯಾಸೆಂಜರ್ ರೈಲಿಗೆ ಬೆಂಕಿ ಹೊತ್ತಿಕೊಂಡಿದ್ದು ಸುಮಾರು 45ಪ್ರಯಾಣಿಕರು ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದಾರೆ. ಉಳಿದಂತೆ ರೈಲಿನಲ್ಲಿ ಸಿಲುಕಿದ್ದ 200 ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ ಎಂದು ದೇಶದ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ. ಹ್ಯಾಂಬರ್ಗ್-ಆಮ್ಸ್ಟರ್‌ಡ್ಯಾಮ್ ರೈಲು ಆಸ್ಟ್ರಿಯಾದ ಆಲ್ಪ್ಸ್‌ನ ಇನ್ಸ್‌ಬ್ರಕ್ ನಗರದ ಸಮೀಪ ಸುರಂಗದ ಮೂಲಕ ಹಾದು ಹೋಗುತ್ತಿದ್ದಾಗ ಅದರ ಓವರ್‌ಹೆಡ್ ವೈರ್ ಒಡೆದು ಬೆಂಕಿ ಹೊತ್ತಿಕೊಂಡಿದೆ ಎಂದು ಆಸ್ಟ್ರಿಯನ್ ರೈಲು ನಿರ್ವಾಹಕರು ತಿಳಿಸಿದ್ದಾರೆ.
ಘಟನೆಯಲ್ಲಿ 45 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಹೊಗೆ ಸೇವನೆಯಿಂದ ಸಂಭವಿಸಿರಬಹುದು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಪಶ್ಚಿಮ ಆಸ್ಟ್ರಿಯಾದ ಫ್ರಿಟ್ಜೆನ್ಸ್‌ನಲ್ಲಿರುವ ಟೆರ್ಫೆನರ್ ಸುರಂಗಕ್ಕೆ ಅಗ್ನಿಶಾಮಕ ಸಿಬ್ಬಂದಿ ಧಾವಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ರೈಲಿನಲ್ಲಿ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಿದ್ದಾರೆ.
ರೈಲಿನಲ್ಲಿ ಬೆಂಕಿ ಹೊತ್ತಿಕೊಂಡ ಘಟನೆಯನ್ನು ತನಿಖೆ ನಡೆಸಲಾಗುತ್ತಿದೆ. ರೈಲು ಬುಧವಾರ ಸಂಜೆ ವಿಯೆನ್ನಾದಿಂದ ಹೊರಟಿದ್ದು, ಗುರುವಾರ ಬೆಳಗ್ಗೆ ಆಮ್‌ಸ್ಟರ್‌ಡ್ಯಾಮ್‌ಗೆ ತಲುಪುವ ಸಮಯದಲ್ಲಿ ಬೆಂಕಿ ಹೊತ್ತಿಕೊಂಡಿದ್ದರಿಂದ ಸುರಂಗದಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ರಕ್ಷಿಸಲಾಯಿತು.