ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಮನೆ ಯಜಮಾನಿಗೆ 2,000 ರೂ. ನೀಡುವಂತೆ ಯಜಮಾನನಿಗೂ 2000 ರೂಪಾಯಿ ಕೊಡಬೇಕು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಹೆಣ್ಣು ಮಕ್ಕಳ ಪರ. ಆದರೆ, ಗಂಡು ಮಕ್ಕಳಿಗೆ ಅನ್ಯಾಯವಾಗುತ್ತಿದೆ. ಅವರಿಗೂ 2000 ರೂ. ನೀಡಿ ಎಂದರು.
ಪತ್ನಿಗೆ ಹಣ ಕೊಟ್ಟು ಪತಿಗೆ ಕೊಡಲಿಲ್ಲ ಅಂದರೆ ಜಗಳ ತಂದಿಡುತ್ತಿದ್ದೀರಿ. ಯಜಮಾನ ಜೊತೆಗೆ ಯಜಮಾನನಿಗೂ ಎರಡು ಸಾವಿರ ರೂಪಾಯಿ ಕೊಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾರತಮ್ಯ ಮಾಡುತ್ತಿದ್ದಾರೆ. ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಿ ಪುರುಷರನ್ನು ದ್ವೇಷಿಸುತ್ತಿದ್ದಾರೆ. ಶಾಸಕರಾದ ಯತ್ನಾಳ್ ಮತ್ತು ಶಿವಲಿಂಗೇಗೌಡರು ಈ ಬಗ್ಗೆ ಕೇಳುತ್ತಾರೆ ಅಂದುಕೊಂಡಿದ್ದೆ. ಅವರು ಕೇಳದ ಕಾರಣ ನಾನೇ ಮುಖ್ಯಮಂತ್ರಿ ಅವರಿಗೆ ಕೇಳುತ್ತಿದ್ದೇನೆ. ಗಂಡು ಮಕ್ಕಳಿಗೂ ಉಚಿತ ಬಸ್, 2000 ರೂ ನೀಡುವಂತೆ ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.
ಪದವೀಧರರಿಗೆ 3000 ರೂ., ಡಿಪ್ಲೋಮಾ ಪದವೀಧರರಿಗೆ 1500 ರೂ. ನೀಡಲಾಗುತ್ತದೆ. ವಿದ್ಯಾವಂತರಿಗೆ ಹಣ ನೀಡಿದಂತೆ ದನ ಕಾಯುವವರಿಗೂ ಒಂದು ಸಾವಿರ ರೂಪಾಯಿ ಕೊಡಬೇಕು ಎಂದು ವಾಟಳ್ ಒತ್ತಾಯಿಸಿದ್ದಾರೆ.