2,000 ರೂ. ಮುಖಬೆಲೆಯ ಶೇ 97 ರಷ್ಟು ನೋಟು ವಾಪಸ್: ಇನ್ನೂ ಬಾಕಿಯಿದೆ 9,760 ಕೋಟಿ ರೂಪಾಯಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

2,000 ರೂ. ಮುಖಬೆಲೆಯ ಅಂದಾಜು ಶೇ.97.26ರಷ್ಟು ನೋಟುಗಳನ್ನು ಇಲ್ಲಿಯ ತನಕ ಬ್ಯಾಂಕುಗಳಿಗೆ ಹಿಂತಿರುಗಿಸಲಾಗಿದ್ದು, ಕೇವಲ 9,760 ಕೋಟಿ ರೂ. ಮೌಲ್ಯದ ನೋಟುಗಳು ಸಾರ್ವಜನಿಕರ ಬಳಿಯಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಶುಕ್ರವಾರ ಮಾಹಿತಿ ನೀಡಿದೆ.

ಈ ವರ್ಷ ಮೇ.19 ರಂದು 2000 ರೂ. ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯುವುದಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿತ್ತು. ಈ ಸಮಯದಲ್ಲಿ ಚಲಾವಣೆಯಲ್ಲಿದ್ದ ನೋಟುಗಳ ಮೊತ್ತ 3.56 ಲಕ್ಷ ರೂ. ಕೋಟಿಗಳಷ್ಟಿತ್ತು. ಅಲ್ಲದೇ ನವೆಂಬರ್ 30ರ ವೇಳೆಗೆ ಚಲಾವಣೆಯಲ್ಲಿದ್ದ ಮೌಲ್ಯ 9760 ಕೋಟಿ ರೂ. ಗಳಿಗೆ ಕುಸಿದಿದೆ. ಈ ಮೂಲಕ 97.26% ರಷ್ಟು 2000 ರೂ. ಮುಖಬೆಲೆಯ ನೋಟ್‍ಗಳು ಠೇವಣೆಯಾಗಿದೆ ಎಂದು ಆರ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಸಾರ್ವಜನಿಕರಿಗೆ ಬ್ಯಾಂಕ್ ಗಳಲ್ಲಿ ಠೇವಣಿಯಿಡಲು ಅಥವಾ ವಿನಿಮಯ ಮಾಡಲು ಸೆಪ್ಟೆಂಬರ್ 30ರ ತನಕ ನಾಲ್ಕು ತಿಂಗಳ ಕಾಲಾವಕಾಶ ನೀಡಿತ್ತು. ಆದರೆ, ಆ ಬಳಿಕ ಈ ಗಡುವನ್ನು ಅಕ್ಟೋಬರ್ 7ರ ತನಕ ವಿಸ್ತರಿಸಲಾಗಿತ್ತು. ಈ ಅಂತಿಮ ಗಡುವಿನ ಬಳಿಕ ಈ ನೋಟುಗಳನ್ನು ಆರ್ ಬಿಐಯ 19 ಪ್ರಾದೇಶಿಕ ವಿತರಣ ಕಚೇರಿಗಳಲ್ಲಿ ಮಾತ್ರ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಅಲ್ಲದೆ, ಸಮೀಪದ ಬ್ಯಾಂಕ್ ಗಳಲ್ಲಿ ಈ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿದೆ.

2,000ರೂ. ನೋಟುಗಳನ್ನು ವ್ಯಕ್ತಿಗಳು ಅಥವಾ ಸಂಸ್ಥೆಗಳು 19 ಆರ್ ಬಿಐ ಪ್ರಾದೇಶಿಕ ವಿತರಣ ಕಚೇರಿಗಳಲ್ಲಿ ಒಮ್ಮೆಗೆ 20,000ರೂ. ತನಕ ವಿನಿಮಯ ಮಾಡಬಹುದು. ವ್ಯಕ್ತಿಗಳು ಅಥವಾ ಸಂಸ್ಥೆಗಳು 2,000ರೂ. ನೋಟುಗಳನ್ನು 19 ಆರ್ ಬಿಐ ವಿತರಣ ಕಚೇರಿಗಳಲ್ಲಿ ಭಾರತದಲ್ಲಿನ ತಮ್ಮ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವಂತೆ ಕೋರಬಹುದು. ಇದಕ್ಕೆ ಯಾವುದೇ ಮಿತಿಯಿಲ್ಲ.ದೇಶದೊಳಗಿನ ವ್ಯಕ್ತಿಗಳು ಅಥವಾ ಸಂಸ್ಥೆಗಳು 2,000ರೂ. ನೋಟುಗಳನ್ನು ಭಾರತೀಯ ಅಂಚೆ ಮೂಲಕ 19 ಆರ್ ಬಿಐ ವಿತರಣಾ ಕಚೇರಿಗಳಲ್ಲಿ ಯಾವುದಕ್ಕೆ ಬೇಕಾದರೂ ಕಳುಹಿಸಬಹುದು ಹಾಗೂ ಭಾರತದಲ್ಲಿನ ತಮ್ಮ ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ಕೋರಬಹುದು. ಈ ರೀತಿಯ ವಿನಿಮಯ ಅಥವಾ ಕ್ರೆಡಿಟ್ ಆರ್ ಬಿಐ ಅಥವಾ ಸರ್ಕಾರದ ಸಂಬಂಧಪಟ್ಟ ನಿಯಮಗಳಿಗೊಳಪಡುತ್ತವೆ. ಹಾಗೆಯೇ ಈ ಸಮಯದಲ್ಲಿ ಅರ್ಹ ಗುರುತು ದಾಖಲೆಗಳನ್ನು ಒದಗಿಸೋದು ಅಗತ್ಯ.

ಇನ್ನು ಯಾವುದೇ ಅಂಚೆ ಕಚೇರಿಯಿಂದ ಅಂಚೆ ಮೂಲಕ 2,000ರೂ. ನೋಟುಗಳನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡುವಂತೆ ಆರ್ ಬಿಐ ವಿತರಣಾ ಕಚೇರಿಗಳಿಗೆ ಕಳುಹಿಸಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!