ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಬಿಎಂಪಿ ಅಧಿಕಾರಿಗಳು ಬಿರಿಯಾನಿ ದಾಸೋಹಕ್ಕೆ ಸಜ್ಜಾಗಿರುವ ನಗರದ ಬೀದಿ ನಾಯಿಗಳ ಹಾವಳಿ ಇತ್ತೀಚೆಗೆ ಮೇರೆ ಮೀರುತ್ತಿದ್ದು, ವೃದ್ಧರು, ಮಕ್ಕಳು, ಮಹಿಳೆಯರು ರಸ್ತೆಯಲ್ಲಿ ಓಡಾಡುವುದು ಕಷ್ಟವಾಗಿದೆ. ಪ್ರತಿ ವರ್ಷ ಸರಾಸರಿ 20 ಸಾವಿರಕ್ಕೂ ಅಧಿಕ ಮಂದಿ ಬೀದಿ ನಾಯಿಗಳ ದಾಳಿಗೆ ತುತ್ತಾಗುವ ಭಯಾನಕ ಸ್ಥಿತಿ ಸೃಷ್ಟಿಯಾಗಿದೆ.
ಅಷ್ಟೇ ಅಲ್ಲ ರಾತ್ರಿ ವೇಳೆ ದ್ವಿಚಕ್ರವಾಹನ ಚಾಲಕರನ್ನು ಅಟ್ಟಾಡಿಸುವ ಈ ಶ್ವಾನ ಸಂಕುಲದ ಬಗ್ಗೆ ಹಲವು ಬಡಾವಣೆಗಳಲ್ಲಿ ಭಯದ ವಾತಾವರಣವಿದೆ. ಒಂದು ಲೆಕ್ಕಾಚಾರದ ಪ್ರಕಾರ ಕಳೆದ ಐದು ವರ್ಷದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಶ್ವಾನ ದಾಳಿಗೆ ಒಳಗಾಗಿದ್ದಾರೆ.
ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ನಾಯಿ ಕಾಟವಿದ್ದರೂ ಅದರ ಬಗ್ಗೆ ಚಕಾರವೆತ್ತದ ಬಿಬಿಎಂಪಿಯ ಅಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಉತ್ತರ ಭಾರತೀಯರ ಪ್ರಭಾವಕ್ಕೆ ಸಿಲುಕಿ ಬೀದಿ ನಾಯಿಗಳಿಗೆ ಮಾಂಸದ ಆಹಾರ ಕೊಟ್ಟು ಮತ್ತಷ್ಟು ಪೋಷಿಸುವ ಕಾರ್ಯಕ್ಕೆ ಮುಂದಾಗಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.