2006ರ ಮುಂಬೈ ರೈಲು ಸ್ಫೋಟ ಪ್ರಕರಣ: ಆರೋಪಿಗಳ ಖುಲಾಸೆ ಪ್ರಶ್ನಿಸಿ ‘ಸುಪ್ರೀಂ’ ಮೆಟ್ಟಿಲೇರಿದ ಮಹಾರಾಷ್ಟ್ರ ಸರ್ಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

2006ರ ಮುಂಬೈ ರೈಲು ಸ್ಫೋಟ ಪ್ರಕರಣದಲ್ಲಿ ಎಲ್ಲ 12 ಅಪರಾಧಿಗಳನ್ನು ಖುಲಾಸೆಗೊಳಿಸಿ ಬಾಂಬೆ ಹೈಕೋರ್ಟ್ ನೀಡಿದ ತೀರ್ಪಿನ ವಿರುದ್ಧ ಮಹಾರಾಷ್ಟ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ಬಾಂಬೆ ಹೈಕೋರ್ಟ್​ ನೀಡಿದ ತೀರ್ಪು ತೀವ್ರ ಆಕ್ಷೇಪಕ್ಕೆ ಕಾರಣವಾಗಿದ್ದು, ತುರ್ತು ವಿಚಾರಣೆ ನಡೆಸಬೇಕು ಎಂದು ಸರ್ಕಾರ ಮುಖ್ಯ ನ್ಯಾಯುಮೂರ್ತಿ ಬಿ.ಆರ್​.ಗವಾಯಿ ಅವರ ಮುಂದೆ ಮಹಾರಾಷ್ಟ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಿಷಯವನ್ನು ಪ್ರಸ್ತಾಪಿಸಿದರು. ಗುರುವಾರದಂದು (ಜುಲೈ 24) ಪ್ರಕರಣವನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.

ಹೈಕೋರ್ಟ್​ ತೀರ್ಪಿನಲ್ಲೇನಿದೆ?

19 ವರ್ಷಗಳ ಹಿಂದಿನ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲು ತನಿಖಾಧಿಕಾರಿಗಳು ವಿಫಲವಾಗಿದ್ದಾರೆ. ಇವುಗಳ ಆಧಾರದ ಮೇಲೆ ಆಪಾದಿತರಿಗೆ ಶಿಕ್ಷೆ ನೀಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟ ಬಾಂಬೆ ಹೈಕೋರ್ಟ್​ನ ನ್ಯಾಯಮೂರ್ತಿಗಳಾದ ಅನಿಲ್ ಕಿಲೋರ್ ಮತ್ತು ಶ್ಯಾಮ್ ಚಂದಕ್ ಅವರ ವಿಶೇಷ ಪೀಠವು ಸೋಮವಾರ ಎಲ್ಲ 12 ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಆದೇಶಿಸಿತು.

ಆರೋಪಿಗಳನ್ನು ಶಿಕ್ಷಿಸಲು ಪ್ರಾಸಿಕ್ಯೂಷನ್ ನೀಡಿರುವ ಸಾಕ್ಷ್ಯಗಳು ನಿರ್ಣಾಯಕವಾಗಿಲ್ಲ ಎಂದ ಪೀಠವು, ಪ್ರಕರಣದಲ್ಲಿ ಐವರು ಆರೋಪಿಗಳಿಗೆ ನೀಡಿದ ಮರಣದಂಡನೆ ಮತ್ತು ಏಳು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ವಿಶೇಷ ನ್ಯಾಯಾಲಯದ ಆದೇಶವನ್ನೂ ರದ್ದುಗೊಳಿಸಿತು.

ವಿಚಾರಣೆಯ ವೇಳೆ ಆರೋಪಿಗಳಿಂದ ಪಡೆದ ತಪ್ಪೊಪ್ಪಿಗೆ ಹೇಳಿಕೆಗಳು ಮತ್ತು ಸಾಕ್ಷಿಗಳ ಹೇಳಿಕೆಗಳ ನಡುವೆ ಸಾಮ್ಯತೆ ಇಲ್ಲ. ಆರೋಪಿಗಳ ತಪ್ಪೊಪ್ಪಿಗೆ ಹೇಳಿಕೆಯನ್ನು ಚಿತ್ರಹಿಂಸೆ ನೀಡಿ ಬರೆಸಿಕೊಂಡಂತಿದೆ. ಅವುಗಳ ಕೆಲ ಭಾಗಗಳನ್ನು ಕಾಪಿ ಪೇಸ್ಟ್ ಮಾಡಿದಂತಿದೆ. ಯಾವುದೂ ನೈಜವಾಗಿಲ್ಲ. ವಿಚಾರಣೆಯ ವೇಳೆ ತಮ್ಮ ಮೇಲೆ ತೀವ್ರ ದೌರ್ಜನ್ಯ ನಡೆದಿದೆ ಎಂದು ಆರೋಪಿಗಳೇ ಹೇಳಿದ್ದಾರೆ ಎಂದಿದೆ.

ಸ್ಫೋಟಕ್ಕೆ ಯಾವ ರೀತಿಯ ಬಾಂಬ್​ ಬಳಸಲಾಗಿದೆ ಎಂಬ ಬಗ್ಗೆಯೂ ನಿಖರ ದಾಖಲೆ ನೀಡಲಾಗಿಲ್ಲ. ಬಾಂಬ್​ ಅಳವಡಿಸುವಾಗ ನೋಡಿದವರು ಮತ್ತು ಅಪರಾಧ ಮಾಡಿದವರ ನಡುವಿನ ಹೇಳಿಕೆಗಳು ಸಮಂಜಸವಾಗಿಲ್ಲ. ಪ್ರಕರಣ ದೀರ್ಘ ಸಮಯ ಹಿಡಿದ ಕಾರಣ ಸಾಕ್ಷ್ಯಗಳು ಅಪರಾಧಿಗಳ ಮುಖವನ್ನು ಗುರುತಿಸಲೂ ಸಾಧ್ಯವಿಲ್ಲ ಎಂದು ಹೇಳಿದ ಪೀಠವು, ಈ ಆಪಾದಿತರಿಗೆ ಶಿಕ್ಷೆ ನೀಡುವುದು ಸುರಕ್ಷಿತ ವಿಧಾನವಲ್ಲ ಎಂದು ಆದೇಶಿಸಿತು.

ಮುಂಬೈನ್ ಏಳು ಉಪನಗರ ರೈಲಿನ ಫಸ್ಟ್​​ಕ್ಲಾಸ್​ ಕಂಪಾರ್ಟ್​ಮೆಂಟ್​​ನಲ್ಲಿ 2006ರ ಜು.11ರಂದು ಉಗ್ರರು ಸರಣಿ ಬಾಂಬ್​ ಸ್ಫೋಟ ನಡೆಸಿದ್ದರು. ಈ ಘಟನೆಯಲ್ಲಿ 189 ಮಂದಿ ಸಾವಿಗೀಡಾಗಿ 800ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!