ಹೊಸದಿಗಂತ ಡಿಜಿಟಲ್ ಡೆಸ್ಕ್:
2006ರ ಜುಲೈ 11ರಂದು ಮುಂಬೈನಲ್ಲಿ ನಡೆದ ಭೀಕರ ರೈಲು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಭಾರತದ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಬಾಂಬೆ ಹೈಕೋರ್ಟ್ ಇತ್ತೀಚೆಗಷ್ಟೇ 12 ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯ ಕಾರಣದಿಂದ ಖುಲಾಸೆಗೊಳಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ಈ ತೀರ್ಪನ್ನು ಸ್ಥಗಿತಗೊಳಿಸಿದ್ದು, ಆರೋಪಿಗಳು ಮತ್ತೆ ಜೈಲು ಸೇರಲಿದ್ದಾರೆಯೇ ಎಂಬ ಪ್ರಶ್ನೆ ಹುಟ್ಟಿಸಿದೆ.
ಬಾಂಬೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ವಿಚಾರಣೆ ಕೈಗೊಂಡು ತಾತ್ಕಾಲಿಕ ತಡೆ ನೀಡಿರುವುದು ಮಹತ್ವಪೂರ್ಣ ಬೆಳವಣಿಗೆಯಾಗಿದೆ. 189 ಜನರ ಸಾವಿಗೆ ಕಾರಣವಾಗಿದ್ದ ಈ ಘಟನೆಯ ಹಿನ್ನೆಲೆ ಬಹುಪಾಲು ದೇಶವ್ಯಾಪಿ ಭಯೋತ್ಪಾದನೆಯ ನೆನಪನ್ನು ಮೆಲಕು ಹಾಕಿಸಿದೆ.
ಈ 12 ಆರೋಪಿಗಳು ಕಳೆದ 18 ವರ್ಷಗಳಿಂದ ಜೈಲಿನಲ್ಲಿದ್ದವರು. ಆರೋಪಿಗಳ ಪೈಕಿ ಒಬ್ಬರು ಜೈಲಿನಲ್ಲಿ ಮೃತಪಟ್ಟಿದ್ದರೆ, ಇನ್ನೊಬ್ಬನನ್ನು ವಿಶೇಷ ನ್ಯಾಯಾಲಯ ಮುಂಚಿತವಾಗಿ ಖುಲಾಸೆಗೊಳಿಸಿತ್ತು. ಆದರೆ ರಾಜ್ಯ ಸರ್ಕಾರ ಆ ತೀರ್ಪಿಗೆ ಯಾವುದೇ ಮೇಲ್ಮನವಿ ಸಲ್ಲಿಸಿರಲಿಲ್ಲ.
ಎಟಿಎಸ್ ಸಲ್ಲಿಸಿದ್ದ ಆರೋಪಪತ್ರದ ಪ್ರಕಾರ, ಮುಂಬೈ ಹೊರವಲಯದ ಗೋವಾಂಡಿ ಪ್ರದೇಶದಲ್ಲಿರುವ ಕೊಠಡಿಯಲ್ಲಿ ಸ್ಫೋಟಕಗಳನ್ನು ತಯಾರಿಸಲಾಗಿತ್ತು. ಪಾಕಿಸ್ತಾನ ಮೂಲದ ಕೆಲ ವ್ಯಕ್ತಿಗಳು ಈ ಯೋಜನೆಗೆ ಸಾಥ್ ನೀಡಿದ್ದರು ಎಂಬುದು ತನಿಖಾ ವರದಿಗಳಲ್ಲಿದೆ. ಆರ್‌ಡಿಎಕ್ಸ್ ಹಾಗೂ ಅಮೋನಿಯಂ ನೈಟ್ರೇಟ್ ಬಳಸಿ ಸ್ಫೋಟಕಗಳನ್ನು ಸಿದ್ಧಪಡಿಸಿ, ಮುಂಬೈ ಲೊಕಲ್ ರೈಲುಗಳಲ್ಲಿ ಏಳು ವಿವಿಧ ಸ್ಥಳಗಳಲ್ಲಿ ಸ್ಫೋಟಗೊಳಿಸಲಾಗಿತ್ತು.
ಖಾರ್, ಬಾಂದ್ರಾ, ಜೋಗೇಶ್ವರಿ, ಮಾತುಂಗ ಮುಂತಾದ ರೈಲು ನಿಲ್ದಾಣಗಳ ನಡುವೆ ಸ್ಫೋಟಗಳು ಸಂಭವಿಸಿ ನೂರಾರು ಜನರು ಗಾಯಗೊಂಡಿದ್ದರು. ಈ ಪ್ರಕರಣವು ಭಾರತೀಯ ಭದ್ರತಾ ವ್ಯವಸ್ಥೆಯ ಸವಾಲಾಗಿ ಪರಿಗಣಿಸಲ್ಪಟ್ಟಿತ್ತು. ಈಗ ಬಾಂಬೆ ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡಿರುವುದರಿಂದ, ತನಿಖಾ ಸಂಸ್ಥೆಗಳಿಗೆ ಹೊಸ ಆಶಾಕಿರಣ ಕಾಣಿಸಿಕೊಂಡಿದೆ.