ಹೊಸ ದಿಗಂತ ಡಿಜಿಟಲ್ ಡೆಸ್ಕ್:
2014ರಲ್ಲಿ ಆರ್ಎಸ್ಎಸ್ ಕಾರ್ಯಕರ್ತನೊಬ್ಬ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಸಂಬಂಧ ಹೊಸ ಶ್ಯೂರಿಟಿ ಹೆಸರಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಮಹಾರಾಷ್ಟ್ರದ ಭಿವಂಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರಾದರು.
ಳೆದ ವರ್ಷ ಡಿಸೆಂಬರ್ನಲ್ಲಿ ಹಿಂದಿನ ಜಾಮೀನುದಾರ ಮಾಜಿ ಕೇಂದ್ರ ಸಚಿವ ಶಿವರಾಜ್ ಪಾಟೀಲ್ ಚಾಕುರ್ಕರ್ ಅವರ ನಿಧನ ನಂತರ ರಾಹುಲ್ ಗಾಂಧಿ ನ್ಯಾಯಾಲಯದ ಮುಂದೆ ಖುದ್ದಾಗಿ ಹಾಜರಾಗಬೇಕಾಗಿತ್ತು. ಇದೀಗ ಆ ಪ್ರಕರಣದಲ್ಲಿ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್ ಅವರನ್ನು ತಮ್ಮ ಹೊಸ ಜಾಮೀನುದಾರ ಎಂದು ಹೆಸರಿಸಿದ್ದಾರೆ.
ಈ ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ ಪರವಕೀಲ ನಾರಾಯಣ ಅಯ್ಯರ್, ನಮಗೆ ಭಾರತೀಯ ನ್ಯಾಯಾಂಗದ ಮೇಲೆ ಸಂಪೂರ್ಣ ನಂಬಿಕೆ ಇದೆ ಮತ್ತು ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ. ಭವಿಷ್ಯದ ವಿಚಾರಣೆಗಳಲ್ಲಿ ಗಾಂಧಿಯವರಿಗೆ ವೈಯಕ್ತಿಕ ಹಾಜರಾತಿಯಿಂದ ಶಾಶ್ವತ ವಿನಾಯಿತಿ ನೀಡಲಾಗಿದ್ದರೂ, ಸೂಕ್ತ ಸಮಯದಲ್ಲಿ ನಾವು ನಮ್ಮ ಸಾಕ್ಷಿಗಳನ್ನು ಹಾಜರುಪಡಿಸುತ್ತೇವೆ ಎಂದು ಹೇಳಿದರು.
2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸೋನಾಲೆ ಗ್ರಾಮದಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡುತ್ತಾ, ಮಹಾತ್ಮ ಗಾಂಧಿಯವರ ಹತ್ಯೆಯ ಹಿಂದೆ ಆರ್ಎಸ್ಎಸ್ ಕೈವಾಡವಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ ಎಂದು ಆರೋಪಿಸಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಕಾರ್ಯಕರ್ತ ರಾಜೇಶ್ ಕುಂಟೆ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 500 (ಮಾನನಷ್ಟ) ಅಡಿಯಲ್ಲಿ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದರು.



