May 1, 2026
Friday, May 1, 2026
spot_img

ಪವನ್ ಖೇರಾಗೆ ‘ಹೈ’ ರಿಲೀಫ್: ಒಂದು ವಾರ ನಿರೀಕ್ಷಣಾ ಜಾಮೀನು ಮಂಜೂರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ನಾಯಕ ಪವನ್ ಖೇರಾಗೆ ತೆಲಂಗಾಣ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ರಿನಿಕಿ ಭುಯಾನ್ ಶರ್ಮಾ ದಾಖಲಿಸಿದ ಎಫ್‌ಐಆರ್‌ಗೆ ಸಂಬಂಧಿಸಿ ಒಂದು ವಾರದ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಸಂಬಂಧಿತ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಲು ಖೇರಾಗೆ ಒಂದು ವಾರ ಕಾಲಾವಕಾಶ ನೀಡಲಾಗಿದೆ.

ಏಪ್ರಿಲ್ 5ರಂದು ನಡೆದ ಸುದ್ದಿಗೋಷ್ಠಿಯಲ್ಲಿ ಪವನ್ ಖೇರಾ, ಮುಖ್ಯಮಂತ್ರಿ ಪತ್ನಿಯ ವಿರುದ್ಧ ಬಹು ಪಾಸ್‌ಪೋರ್ಟ್‌ಗಳು ಮತ್ತು ವಿದೇಶಿ ಆಸ್ತಿ ಕುರಿತ ಗಂಭೀರ ಆರೋಪಗಳನ್ನು ಮಾಡಿದ್ದರು. ಈ ಹೇಳಿಕೆಗಳ ಬಳಿಕ ರಿನಿಕಿ ಭುಯಾನ್ ಶರ್ಮಾ ಅವರ ದೂರಿನ ಮೇರೆಗೆ ಗುವಾಹಟಿ ಕ್ರೈಂ ಬ್ರಾಂಚ್‌ನಲ್ಲಿ ಹಲವು ವಿಧಿಗಳಡಿ ಪ್ರಕರಣ ದಾಖಲಾಗಿತ್ತು. ಶರ್ಮಾ ಕುಟುಂಬವು ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿ ಹಾಕಿ, ಅವುಗಳನ್ನು ಸುಳ್ಳು ಮತ್ತು ದುರುದ್ದೇಶಪೂರಿತವೆಂದು ಹೇಳಿತ್ತು.

ಇದನ್ನೂ ಓದಿ:

ಪ್ರಕರಣದ ಹಿನ್ನೆಲೆಯಲ್ಲಿ ಅಸ್ಸಾಂ ಪೊಲೀಸ್ ತಂಡವು ದೆಹಲಿ ಹಾಗೂ ಹೈದರಾಬಾದ್‌ನಲ್ಲಿರುವ ಖೇರಾ ನಿವಾಸಗಳ ಬಳಿ ವಿಚಾರಣೆಗೆ ತೆರಳಿದ್ದರೂ, ಅವರು ಅಲ್ಲಿರಲಿಲ್ಲ ಎಂದು ತಿಳಿದುಬಂದಿದೆ. ಇದಾದ ಬಳಿಕ ಖೇರಾ ತೆಲಂಗಾಣ ಹೈಕೋರ್ಟ್‌ಗೆ ಮುನ್ನೆಚ್ಚರಿಕಾ ಜಾಮೀನು ಅರ್ಜಿ ಸಲ್ಲಿಸಿದ್ದರು.

ತಮ್ಮ ಅರ್ಜಿಯಲ್ಲಿ ಖೇರಾ, ತಾವು ಕಾನೂನು ಪಾಲಿಸುವ ನಾಗರಿಕರಾಗಿದ್ದು, ಯಾವುದೇ ಅಪರಾಧ ಹಿನ್ನೆಲೆ ಇಲ್ಲ ಎಂದು ಹೇಳಿ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ. ಈ ಬೆಳವಣಿಗೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !