ಹೊಸದಿಗಂತ ಡಿಜಿಟಲ್ ಡೆಸ್ಕ್:
ವಯನಾಡು ಅಕ್ಷರಶಃ ಸ್ಮಶಾನದಂತಾಗಿದೆ, ಕಣ್ಣೆದುರು ಮೃತದೇಹಗಳನ್ನಿಟ್ಟುಕೊಂಡು ಸಂಬಂಧಿಕರು ಕಣ್ಣೀರು ಹಾಕುತ್ತಿದ್ದಾರೆ. ಎಷ್ಟೋ ಮಂದಿ ನಾಪತ್ತೆಯಾಗಿದ್ದು, ಅವರೆಲ್ಲಾ ಬದುಕಿದ್ದಾರಾ ಇಲ್ಲವಾ ಎಂದು ಗೊತ್ತಿಲ್ಲದೇ ಜನ ಒದ್ದಾಡುತ್ತಿದ್ದಾರೆ. ಇಂದಿನಿಂದ 3 ಸಾವಿರ ಮಂದಿಯಿಂದ ಮೃತದೇಹ ಪತ್ತೆ ಮಾಡುವ ಕಾರ್ಯ ನಡೆಯಲಿದೆ.
ಭೂಕುಸಿತಗೊಂಡ ಜಾಗದಲ್ಲಿ ಎಷ್ಟು ಮನೆಗಳು ಇದ್ದವು ಎನ್ನುವುದರ ಬಗ್ಗೆ ರೇಷನ್ ಕಾರ್ಡ್, ವೋಟರ್ ಐಡಿ ಡೇಟಾದ ಮೂಲಕ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ, ಮೃತರ ಸಂಖ್ಯೆ ಎಷ್ಟು ಎನ್ನುವ ಅಧಿಕೃತ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಮಾಹಿತಿ ಸಿದ್ಧಪಡಿಸುವ ವೇಳೆಗೆ ಇನ್ನಷ್ಟು ಮೃತದೇಹಗಳು ಸಿಗುತ್ತಿವೆ.
ಶೋಧಕಾರ್ಯಕ್ಕೆ ಸ್ಥಳೀಯರು ಸಹಕಾರ ನೀಡುತ್ತಿದ್ದಾರೆ. ಒಟ್ಟಾರೆ 206 ಮಂದಿ ನಾಪತ್ತೆಯಾಗಿದ್ದು, ಇವರನ್ನು ಹುಡುಕಲು ಪ್ರಯತ್ನ ಮಾಡಲಾಗುತ್ತಿದೆ. ಈ ವರೆಗೆ 256 ಶವಪರೀಕ್ಷೆಗಳನ್ನು ಮಾಡಲಾಗಿದೆ. 154 ಶವಗಳನ್ನು ಜಿಲ್ಲಾಡಳಿತಕ್ಕೆ ಹಸ್ತಾಂತರಿಸಲಾಗಿದೆ, ನಿಲಂಬೂರ್ ಮತ್ತು ಪೋತುಕಲ್‌ನಲ್ಲಿ ಪತ್ತೆಯಾದ ಶವಗಳನ್ನು ಸಹ ಹೊರತೆಗೆಯಲಾಗಿದೆ ಮತ್ತು ಶವಪರೀಕ್ಷೆ ಪೂರ್ಣಗೊಂಡಿದೆ ಎಂದು ಕೇರಳ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಹಿತಿ ನೀಡಿದ್ದಾರೆ.