ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಆಸಿಯಾನ್ ಜನಸಂಖ್ಯೆ ಒಟ್ಟು ಸೇರಿಸಿದರೆ ವಿಶ್ವದ ಕಾಲುಭಾಗದಷ್ಟಾಗುತ್ತದೆ. ನಾವು ಭೌಗೋಳಿಕವಾಗಿ ಮಾತ್ರ ಹತ್ತಿರ ಇಲ್ಲ, ಐತಿಹಾಸಿಕ ಹಾಗೂ ಮೌಲ್ಯಗಳ ಸಂಬಂಧ ಇದೆ. ಅಭಿವೃದ್ಧಿಶೀಲ ಜಗತ್ತಿನಲ್ಲಿ ನಾವೆಲ್ಲರೂ ಸಹವರ್ತಿಗಳಾಗಿದ್ದೇವೆ ಪ್ರಧಾನಿ ಮೋದಿ ಹೇಳಿದ್ದಾರೆ.
ಮಲೇಷ್ಯಾದ ಕೌಲಾಲಂಪುರ್ನಲ್ಲಿ ನಡೆಯುತ್ತಿರುವ 47ನೇ ಆಸಿಯನ್ ಶೃಂಗಸಭೆಯನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಿದರು.
ಈ ವೇಳೆ, ಸಮಿಟ್ ಆಯೋಜಿಸಿದ್ದಕ್ಕೆ ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರನ್ನು ಅಭಿನಂದಿಸಿದ ಪ್ರಧಾನಿ ಮೋದಿ, ಭಾರತ ಹಾಗೂ ಆಸಿಯಾನ್ ಸಂಘಟನೆಯ ಸಹಭಾಗಿತ್ವದ ಪ್ರಾಮುಖ್ಯತೆಯನ್ನು ಹೇಳಿದ್ದಾರೆ.
ಈ 21ನೇ ಶತಮಾನವು ನಮ್ಮ ಶತಮಾನವಾಗಿದೆ. ಇದು ಭಾರತ ಹಾಗೂ ಆಸಿಯನ್ನ ಶತಮಾನವಾಗಿದೆ. ಆಸಿಯನ್ ಸಮುದಾಯದ ಗುರಿ 2045 ಮತ್ತು ವಿಕಸಿತ ಭಾರತ್ 2047 ಯೋಜನೆಗಳು ಇಡೀ ಮಾನವಕುಲದ ಒಳಿತಿಗೆ ಪೂರಕವಾಗಲಿವೆ ಎಂದು ಹೇಳಿದ್ದಾರೆ.
ಭಾರತ ಪ್ರತಿಯೊಂದು ಬಿಕ್ಕಟ್ಟಿನಲ್ಲೂ ಆಸಿಯನ್ ಹಾಗೂ ಅದರ ಮೈತ್ರಿದೇಶಗಳೊಂದಿಗೆ ದೃಢವಾಗಿ ನಿಂತಿದೆ. ಸಾಗರ ಆರ್ಥಿಕತೆ, ಸಾಗರ ಭದ್ರತೆ ಇತ್ಯಾದಿಯಲ್ಲಿ ಪರಸ್ಪರ ಸಹಕಾರ ಹೆಚ್ಚುತ್ತಿದೆ. ಶಿಕ್ಷಣ, ಪ್ರವಾಸೋದ್ಯಮ, ವಿಜ್ಞಾನ ತಂತ್ರಜ್ಞಾನ, ಆರೋಗ್ಯ, ಹಸಿರು ಇಂಧನ, ಸೈಬರ್ ಸೆಕ್ಯೂರಿಟಿ ವಿಚಾರದಲ್ಲಿ ಸಹಕಾರ ಬಲಪಡಿಸುವ ಕೆಲಸ ಆಗುತ್ತಿದೆ ಎಂದು ಮೋದಿ ತಿಳಿಸಿದ್ದಾರೆ.
ಅದೇ ವೇಳೆ, ಥಾಯ್ಲೆಂಡ್ನ ರಾಜಆತೆ ಸಿರಿಕೀತ್ ಅವರ ನಿಧನಕ್ಕೆ ಮೋದಿ ಸಂತಾಪ ಸೂಚಿಸಿದ್ದಾರೆ.

