ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿಂಧೆ ಪಾಳಯಕ್ಕೆ ಸೇರ್ಪಡೆಗೊಂಡಿರುವ ಶಿವಸೇನೆ ಬಂಡಾಯ ಶಾಸಕರಲ್ಲಿ ಹಲವು ಮಂದಿ ಅತೃಪ್ತರಾಗಿದ್ದು, 22 ಶಾಸಕರು ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ ಎಂದು ಸಾಮ್ನಾ ನಿಯತಕಾಲಿಕೆ ವರದಿ ಮಾಡಿದೆ. ಈ ಮ್ಯಾಗಜಿನ್ ಉದ್ಧವ್ ಠಾಕ್ರೆ ಅವರ ಶಿವಸೇನೆ ಪಕ್ಷದ ಅಧಿಕೃತ ನಿಯತಕಾಲಿಕೆ ಎನ್ನಲಾಗಿದೆ.
ಸಾಮ್ನಾ ಭಾನುವಾರ ಈ ವಿಷಯದ ಕುರಿತು ಲೇಖನವನ್ನು ಪ್ರಕಟಿಸಿದೆ. ಶಿಂಧೆ ಪಾಳಯದಲ್ಲಿರುವ 40 ಶಾಸಕರ ಪೈಕಿ 22 ಮಂದಿ ಬಿಜೆಪಿ ಪಾಳಯ ಸೇರಲಿದ್ದಾರೆ ಎಂದು ಸಾಮ್ನಾ ಭವಿಷ್ಯ ನುಡಿದಿದೆ. ಕೇವಲ ತಾತ್ಕಾಲಿಕವಾಗಿ ಶಿಂಧೆ ಅವರನ್ನು ಬಿಜೆಪಿ ಸಿಎಂ ಮಾಡಿದ್ದು, ಮುಖ್ಯಮಂತ್ರಿ ಸ್ಥಾನ ಯಾವಾಗ ಬೇಕಾದರೂ ಕೈ ತಪ್ಪಬಹುದು ಎಂದು ಬರೆದಿದೆ. ಶಿಂಧೆ ಗುಂಪು ಅಂಧೇರಿಯಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಯಸಿದರೆ ಬಿಜೆಪಿ ಅದಕ್ಕೆ ಅಡ್ಡಗಾಲು ಹಾಕಿದೆ. ಸದ್ಯ ಶಿಂಧೆ ಬಣದ 22 ಶಾಸಕರು ಅತೃಪ್ತರಾಗಿದ್ದು, ಬಿಜೆಪಿಯೊಂದಿಗೆ ವಿಲೀನಗೊಳ್ಳಲು ಸಿದ್ಧರಾಗಿದ್ದಾರೆ ಎಂದು ಸಾಮ್ನಾ ಹೇಳಿದೆ.
ಮತ್ತೊಂದೆಡೆ, ಶಿಂಧೆ ಬಣದ ಎಲ್ಲಾ ಶಾಸಕರು ಮುಖ್ಯಮಂತ್ರಿ ಕಚೇರಿಯ ಹಿಡಿತದಲ್ಲಿದ್ದಾರೆ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿರುವುದಾಗಿ ನಿಯತಕಾಲಿಕೆ ಬಹಿರಂಗಪಡಿಸಿದೆ. ಶಿಂಧೆ ತನಗಷ್ಟೇ ಅಲ್ಲ ಮಹಾರಾಷ್ಟ್ರಕ್ಕೂ ದೊಡ್ಡ ಅನ್ಯಾಯ ಮಾಡುತ್ತಿದ್ದು, ಬಿಜೆಪಿ ತನ್ನ ಹಿತಾಸಕ್ತಿಗಾಗಿ ಶಿಂಧೆಯನ್ನು ಬಳಸಿಕೊಳ್ಳುತ್ತಿದೆ ಎಂದು ನಿಯತಕಾಲಿಕೆ ಅಭಿಪ್ರಾಯಪಟ್ಟಿದೆ.