ಹೊಸದಿಗಂತ ಡಿಜಿಟಲ್ ಡೆಸ್ಕ್:
ಉದ್ಯೋಗ ಹುಡುಕಾಟದಲ್ಲಿ ಜನರಿಗೆ ಸಹಾಯ ಮಾಡುವ ಕಂಪನಿಯಲ್ಲೇ ಇದೀಗ ಉದ್ಯೋಗ ಕಡಿತಗಳು ನಡೆದಿವೆ. ಆರ್ಥಿಕ ಅನಿಶ್ಚಿತತೆಯ ಕಾರಣದಿಂದಾಗಿ ಜಾಗತಿಕವಾಗಿ ಉದ್ಯೋಗ ಕಡಿತಗಳು ನಡೆಯುತ್ತಿದ್ದು ಇದೀಗ ಉದ್ಯೋಗ ಹುಡುಕಲು ಸಹಾಯ ಮಾಡುವ ʼಇಂಡೀಡ್ʼ (indeed) ಕಂಪನಿಯಲ್ಲಿಯೇ ಉದ್ಯೋಗ ಕಡಿತ ನಡೆದಿದ್ದು ಬರೋಬ್ಬರಿ 2,200 ಜನರನ್ನು ವಜಾಗೊಳಿಸಲಾಗಿದೆ.
ಈ ಕುರಿತು ಕಂಪನಿಯ ಸಿಇಒ ಕ್ರಿಸ್ ಹೈಮ್ಸ್ ಬ್ಲಾಗ್ ಪೋಸ್ಟ್ ಒಂದರಲ್ಲಿ “ಉದ್ಯೋಗ ಹುಡುಕಾಟಕ್ಕೆ ಸಹಾಯ ಮಾಡುವ ಉದ್ದೇಶ ಹೊಂದಿರುವ ಈ ಕಂಪನಿಯಲ್ಲಿ ಇಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಆದರೆ ಇದು ಅನಿವಾರ್ಯ. ಕೆಲಸ ಕಳೆದುಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಗೂ ಸಾಧ್ಯವಾದಷ್ಟು ಬೆಂಬಲ ನೀಡಲು ನಾವು ಕೆಲಸ ಮಾಡುತ್ತಿದ್ದೇವೆ” ಎಂದು ಬರೆದಿದ್ದಾರೆ. ಅಲ್ಲದೇ ತಾನು 25 ಶೇಕಡಾ ಸಂಬಳ ಕಡಿತವನ್ನು ಸ್ವೀಕರಿಸುವುದಾಗಿಯೂ ಹೇಳಿದ್ದಾರೆ.
ಸಿಇಒ ಹೈಮ್ಸ್ ಪ್ರಕಾರ ಕಂಪನಿಯ ಎಲ್ಲಾ ವಿಭಾಗಗಳಲ್ಲಿಯೂ ಕಡಿತವನ್ನು ಮಾಡಲಾಗಿದೆ. ವಜಾಗೊಂಡ ಉದ್ಯೋಗಿಗಳಿಗೆ ಮೇಲ್ ನಲ್ಲಿ ವಿಷಯ ತಿಳಿಸಲಾಗಿದೆ. ಅಂಥವರಿಗೆ ಹೆಚ್ಚಿನ ಸಹಾಯವನ್ನು ನೀಡಲಾಗುತ್ತಿದ್ದು ವಜಾಪ್ಯಾಕೇಜ್ ಘೋಷಿಸಲಾಗಿದೆ.