ಹೊಸದಿಗಂತ ಡಿಜಿಟಲ್ ಡೆಸ್ಕ್:
ದೋಣಿ ಮುಳುಗಿ 26 ಮಂದಿ ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿರುವ ಘಟನೆ ನೈಜೀರಿಯಾದಲ್ಲಿ ಭಾನುವಾರ ನಡೆದಿದೆ.
ಮೋಕ್ವಾ ಜಿಲ್ಲೆಯ ನೈಜೀರಿಯಾದ ನೈಜರ್ ಎಂಬಲ್ಲಿ ಮರದ ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಘಟನೆ ಜರುಗಿದೆ. ದೋಣಿಯು 100ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು ಈ ವೇಳೆ ದೋಣಿ ಮುಳುಗಿ 26 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ 12 ಜನರಿಗೆ ಗಾಯಗಳಾಗಿವೆ ಮತ್ತು ಉಳಿದವರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ ಎಂದು ನೈಜೀರಿಯಾದ ರಾಷ್ಟ್ರೀಯ ತುರ್ತು ನಿರ್ವಹಣಾ ಸಂಸ್ಥೆಯ ಮುಖ್ಯಸ್ಥ ಝೈನಾಬ್ ಸುಲೈಮಾನ್ ತಿಳಿಸಿದ್ದಾರೆ.
ರಾಜಧಾನಿ ಮಿನ್ನಾದಿಂದ 251 ಕಿಲೋಮೀಟರ್ ದೂರದಲ್ಲಿ ಗ್ಬಾಜಿಬೋ ಸಮುದಾಯದವರು ವಾಸಿಸುತ್ತಿರುವ ನೈಜರ್ ನದಿಯಲ್ಲಿ ದೋಣಿ ಮಗುಚಿದೆ. ರಕ್ಷಣಾ ಕಾರ್ಯಾಚರಣೆ ಮೂಲಕ ಈವರೆಗೆ ಒಟ್ಟು 24 ಶವಗಳನ್ನು ಪತ್ತೆ ಹಚ್ಚಲಾಗಿದೆ ಮತ್ತು 30 ಜನರನ್ನು ರಕ್ಷಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.
ಈ ದುರಂತದ ನಿಖರ ಕಾರಣ ತಿಳಿದುಬಂದಿಲ್ಲ, ತನಿಖೆಯ ಬಳಿಕವಷ್ಟೇ ಮಾಹಿತಿ ಹೊರಬೀಳಲಿದೆ.