ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಕಳೆದ 10 ವರ್ಷದಲ್ಲಿ 25 ಕೋಟಿ ಜನರನ್ನು ಬಡತನ ರೇಖೆಯಿಂದ ಹೊರತರಲಾಗಿದೆ.ನಾವು ಸುಳ್ಳು ಘೋಷಣೆ ಮಾಡಿಲ್ಲ. ಬಡತನ ನಿವಾರಿಸುವ ಕೆಲಸ ಮಾಡಿದ್ದೇವೆ. ಈವರೆಗೆ ಹೊಸದಾಗಿ 4 ಕೋಟಿ ಮನೆ ನಿರ್ಮಿಸಿಕೊಟ್ಟಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭ ಮಾತನಾಡಿದ ಪ್ರಧಾನಿ ಮೋದಿ, ಈ ಹಿಂದೆ 40 ವರ್ಷಗಳ ಕಾಲ ಗರೀಬಿ ಹಠಾವೋ (ಬಡತನವನ್ನು ಹೊಡೆದೋಡಿಸಿ) ಎಂದು ಘೋಷಣೆ ಕೂಗಿದವರು ಬಡತನ ನಿರ್ಮೂಲನೆ ಮಾಡಲಿಲ್ಲ. ಆದರೆ, ನಾವು ಸುಳ್ಳಿನ ಘೋಷಣೆ ಮಾಡಿಲ್ಲ. 4 ದಶಕದಲ್ಲಿ ಮಾಡಲಾಗದ ಕೆಲಸವನ್ನು ಒಂದೇ ದಶಕದಲ್ಲಿ ನಾವು ಮಾಡಿದ್ದೇವೆ. ಬಡತನವನ್ನು ನಿವಾರಿಸುವ ಕೆಲಸ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಇಲ್ಲಿಯವರೆಗೆ ಬಡವರಿಗೆ 4 ಕೋಟಿ ಮನೆಗಳನ್ನು ನೀಡಲಾಗಿದೆ. ಕಷ್ಟದ ಜೀವನವನ್ನು ನಡೆಸಿದವರಿಗೆ ಮಾತ್ರ ಮನೆ ಪಡೆಯುವುದರ ಮೌಲ್ಯ ಏನೆಂದು ಅರ್ಥವಾಗುತ್ತದೆ. ಹಿಂದಿನ ಕಾಲದಲ್ಲಿ ಮಹಿಳೆಯರು ಶೌಚಾಲಯ ವ್ಯವಸ್ಥೆಯ ಕೊರತೆಯಿಂದ ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದರು. ಈ ಎಲ್ಲ ಸೌಲಭ್ಯಗಳನ್ನು ಹೊಂದಿರುವವರು ಅದರಿಂದ ವಂಚಿತರಾದವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದ್ದಾರೆ.
ನಾವು 2025ನೇ ವರ್ಷದಲ್ಲಿದ್ದೇವೆ. 21ನೇ ಶತಮಾನದ 25% ಭಾಗ ಅಂತ್ಯವಾಗಿದೆ. ಸ್ವಾತಂತ್ರ್ಯದ ಬಳಿಕ ಏನು ಬದಲಾಗಿದೆ ಎಂಬುದನ್ನು ಸಮಯ ನಿರ್ಧಾರ ಮಾಡಲಿದೆ. ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಭವಿಷ್ಯದ 25 ವರ್ಷದ ವಿಕಸಿತ್ ಭಾರತದ ಕಲ್ಪನೆಯನ್ನು ತೆರೆದಿಟ್ಟಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭಾಷಣ ವಿಕಸಿತ್ ಭಾರತದ ಸಂಕಲ್ಪವನ್ನು ಗಟ್ಟಿಗೊಳಿಸಿದೆ. ನಮ್ಮ ದೇಶದ ಜನರು 10 ವರ್ಷದಿಂದ ಸೇವೆ ಮಾಡಲು ನನಗೆ ಅವಕಾಶ ನೀಡಿದ್ದಾರೆ. ಅವರಿಗೆ ಧನ್ಯವಾದ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
‘ಹರ್ ಘರ್ ಜಲ ಮಿಷನ್’ ಬಗ್ಗೆ ಪ್ರಧಾನಿ ಮೋದಿ ಮಾತನಾಡಿದರು.ಕೆಲವರು ಜಕುಝಿ, ಐಷಾರಾಮಿ ಸ್ನಾನದ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸುತ್ತಾರೆ. ಆದರೆ ನಾವು ಹರ್ ಘರ್ ಜಲ ಅಭಿಯಾನದ ಮೂಲಕ ಪ್ರತಿ ಮನೆಗೆ ಶುದ್ಧ ನೀರು ತಲುಪಿಸುವತ್ತ ಗಮನ ಹರಿಸಿದ್ದೇವೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ಹೆಸರು ಹೇಳದೆಯೇ ಅವರ ವಿರುದ್ಧ ಪರೋಕ್ಷವಾಗಿ ಮೋದಿ ಚಾಟಿ ಬೀಸಿದ್ದಾರೆ.