ಹೊಸದಿಗಂತ ಡಿಜಿಟಲ್ ಡೆಸ್ಕ್:
4 ದಿನ ಮುಂಚಿತವಾಗಿಯೇ ಭಾರತಕ್ಕೆ ಕಾಲಿಟ್ಟಿದ್ದ ಮಾನ್ಸೂನ್ ಮಾರುತಗಳು ಈ ಬಾರಿ ನಿರೀಕ್ಷೆಗಿಂತ ಹೆಚ್ಚು ಮಳೆ ಸುರಿಸುತ್ತವೆ ಎಂದು ವರದಿಯಾಗಿತ್ತು. ಆದರೆ ಮಾನ್ಸೂನ್ ಮಾರುತಗಳ ದಿಢೀರ್ ವಿರಾಮದಿಂದಾಗಿ ದೇಶದಲ್ಲಿ ಶೇ.25ರಷ್ಟು ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಈ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ವರದಿಯಲ್ಲಿ ಮಾಹಿತಿ ನೀಡಿದ್ದು, ‘ನೈಋತ್ಯ ಮಾನ್ಸೂನ್ ಮುಖ್ಯ ಭೂಭಾಗಕ್ಕೆ ಬಲವಾದ ಪ್ರವೇಶ ಮಾಡಿದ ನಂತರ ವಿರಾಮ ತೆಗೆದುಕೊಂಡಿದೆ, ಇದರ ಪರಿಣಾಮವಾಗಿ 2025 ರ ಋತುವಿನ ಮೊದಲ ವಾರದಲ್ಲಿ ಸುಮಾರು 25 ಪ್ರತಿಶತದಷ್ಟು ಕೊರತೆ ಉಂಟಾಗಿದೆ ಎಂದು ಹೇಳಿದೆ.
‘ಜೂನ್ 1 ರಿಂದ ಜೂನ್ 8 ರವರೆಗೆ ಮಳೆ 20.4 ಮಿಲಿಮೀಟರ್ ದಾಖಲಾಗಿದೆ, ಆದರೆ ಈ ಅವಧಿಯಲ್ಲಿ ಸಾಮಾನ್ಯ ಮಟ್ಟ ಅಂದರೆ ಸುಮಾರು 27.2 ಮಿಲಿಮೀಟರ್ ಮಳೆಯಾಗುತ್ತಿತ್ತು ಎಂದು ಹೇಳಲಾಗಿದೆ. ಮೇ 29 ರ ಸುಮಾರಿಗೆ ಮಹಾರಾಷ್ಟ್ರ ಮತ್ತು ಉತ್ತರ ಬಂಗಾಳದ ಕೆಲವು ಭಾಗಗಳಲ್ಲಿ ಮಾನ್ಸೂನ್ ಸ್ಥಗಿತಗೊಂಡಿದೆ. ಆದರೆ ದಕ್ಷಿಣ ಪರ್ಯಾಯ ದ್ವೀಪ ಭಾರತದ ಮೇಲೆ ಮಾನ್ಸೂನ್ ಸಕ್ರಿಯ ಹಂತವನ್ನು ಪ್ರವೇಶಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.