ಹೊಸದಿಗಂತ ಡಿಜಿಟಲ್ ಡೆಸ್ಕ್:
ಲೋಕಸಭೆಯಲ್ಲಿ I.N.D.I.A. ಮೈತ್ರಿಕೂಟ ಕನಿಷ್ಠ 295 ಸ್ಥಾನಗಳನ್ನು ಗೆಲ್ಲಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿರುವ ತಮ್ಮ ನಿವಾಸದಲ್ಲಿ I.N.D.I.A. ಒಕ್ಕೂಟದ ನಾಯಕರ ಸಭೆ ನಡೆಯಿತು. ಸಭೆ ಬಳಿಕ ಮಾತನಾಡಿದ ಅವರು, ನಾವು ಒಗ್ಗಟ್ಟಾಗಿದ್ದೇವೆ ಮತ್ತು ನಾವು ಒಗ್ಗಟ್ಟಿನಿಂದ ಇರುತ್ತೇವೆ. ನಮ್ಮನ್ನು ವಿಭಜಿಸಲು ಪ್ರಯತ್ನಿಸಬೇಡಿ ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನದ ದಿನದಂದು ಒಕ್ಕೂಟದ ನಾಯಕರು ಸಭೆ ನಡೆಸಿದರು. ಟಿಎಂಸಿ ಮುಖ್ಯಸ್ಥೆ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ಚುನಾವಣೆಯ ಕಾರಣ ಮತ್ತು ರೆಮಲ್ ಚಂಡಮಾರುತದ ಪರಿಣಾಮವನ್ನು ಪರಿಶೀಲಿಸುವ ಉದ್ದೇಶದಿಂದ ಸಭೆಗೆ ಹಾಜರಾಗುವುದಿಲ್ಲ ಎಂದು ಈಗಾಗಲೇ ಹೇಳಿದ್ದರು. ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಕೂಡ ಸಭೆಗೆ ಗೈರಾಗಿದ್ದರು.
ಕಾಂಗ್ರೆಸ್, ಸಮಾಜವಾದಿ ಪಕ್ಷ, ಸಿಪಿಐ-ಎಂ, ಸಿಪಿಐ, ಡಿಎಂಕೆ, ಜೆಎಂಎಂ, ಎಎಪಿ, ಆರ್‌ಜೆಡಿ, ಶಿವಸೇನೆ (ಯುಬಿಟಿ), ಮತ್ತು ಎನ್‌ಸಿಪಿ (ಶರದ್ ಪವಾರ್) ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಭೆಯಲ್ಲಿ ಕಾಂಗ್ರೆಸ್ ಸಂಸದೀಯ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕೆಸಿ ವೇಣುಗೋಪಾಲ್, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಎನ್‌ಸಿಪಿ ನಾಯಕ ಜಿತೇಂದ್ರ ಅವದ್, ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಎಎಪಿ ಮುಖಂಡ ರಾಘವ್ ಚಡ್ಡಾ, ಸಂಜಯ್ ಸಿಂಗ್. ಆರ್‌ಜೆಡಿ ನಾಯಕ ತೇಜಸ್ವಿ ಯಾದವ್, ಸಂಜಯ್ ಯಾದವ್, ಜಾರ್ಖಂಡ್ ಮುಖ್ಯಮಂತ್ರಿ ಚಂಪೈ ಸೊರೆನ್, ಕಲ್ಪನಾ ಸೊರೆನ್, ಡಿಎಂಕೆಯ ಟಿಆರ್ ಬಾಲು, ಸಿಪಿಐನ ಡಿ ರಾಜಾ, ಸಿಪಿಐಎಂ ನಾಯಕ ಸೀತಾರಾಮ್ ಯೆಚೂರಿ, ಸಿಪಿಐ(ಎಂಎಲ್) ನಾಯಕ ದೀಪಂಕರ್ ಭಟ್ಟಾಚಾರ್ಯ, ಶಿವಸೇನಾ (ಯುಬಿಟಿ) ಮುಖಂಡ ಅನಿಲ್ ದೇಸಾಯಿ, ಜಮ್ಮು ಮತ್ತು ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಇದ್ದರು.