ಹೊಸದಿಗಂತ ವರದಿ ವಿಜಯಪುರ:
ಗುಮ್ಮಟನಗರದಲ್ಲಿ ಬುಧವಾರ ತಡ ರಾತ್ರಿ ಲಘು ಭೂಕಂಪನವಾಗಿದ್ದು, ಸಾರ್ವಜನಿಕರು ಭೀತಿಗೊಳಗಾಗಿದ್ದಾರೆ.
ತಡರಾತ್ರಿ 1.38ರ ಸುಮಾರಿಗೆ 3.4 ತೀವ್ರತೆಯ ಭೂಕಂಪನವಾಗಿದ್ದು, ಭೂಮಿ ಕಂಪಿಸಿದ ಅನುಭವದಿಂದಾಗಿ ಜನರು ಆತಂಕಗೊಂಡಿದ್ದಾರೆ. ಕೂಡಲೇ ಜನರು ಮನೆಯೊಳಗಿಂದ ಹೊರಗೆ ಓಡಿ ಬಂದಿದ್ದು, ರಾತ್ರಿ ನಿದ್ರೆ ಮಾಡದೇ ಕೆಲ ಹೊತ್ತು ಜಾಗರಣೆ ಮಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು.
ನಗರದ ಕೆಲ ಪ್ರದೇಶ ಸೇರಿದಂತೆ ಅಲ್ ಅಮೀನ್ ಮೇಡಿಕಲ್ ಕಾಲೇಜ್ ಮುಂಭಾಗ, ತೊರವಿ ಹಾಗೂ ಐನಾಪುರ ಗ್ರಾಮ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಲಘು ಭೂಕಂಪನವಾಗಿದೆ.
ಭೂಕಂಪನ ಕುರಿತು ರಿಕ್ಟರ್ ಮಾಪಕದಲ್ಲಿ 3.4 ರಷ್ಟು ದಾಖಲಾಗಿದ್ದು, ಕೆಎಸ್ಎನ್ಡಿಎಂಸಿ ದೃಢಪಡಿಸಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.