April 16, 2026
Thursday, April 16, 2026
spot_img

ಗಲಾಟೆ, ಗದ್ದಲದ ನಡುವೆ ಲೋಕಸಭೆಯಲ್ಲಿ ಮಂಡನೆಯಾಯ್ತು 3 ಮಸೂದೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ರಾಜಕೀಯ ದಿಕ್ಕನ್ನು ಬದಲಾಯಿಸಬಹುದಾದ ಮಹತ್ವದ ಬೆಳವಣಿಗೆಯಾಗಿ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಹಾಗೂ ಗಡಿ ನಿರ್ಣಯ ಮಸೂದೆ ಮಂಡನೆಯಾಗಿದೆ.

ಮಹಿಳೆಯರಿಗೆ 33 ಶೇಕಡಾ ಮೀಸಲಾತಿ ನೀಡುವ ಉದ್ದೇಶದ ಜೊತೆಗೆ, ಲೋಕಸಭೆಯ ಪ್ರಸ್ತುತ 543 ಸ್ಥಾನಗಳನ್ನು 850ಕ್ಕೆ ಹೆಚ್ಚಿಸುವ ಪ್ರಸ್ತಾವನೆ ಸರ್ಕಾರ ಮುಂದಿಟ್ಟಿದೆ. ಇದೇ ಮಾದರಿಯಲ್ಲಿ ರಾಜ್ಯ ವಿಧಾನಸಭೆಗಳ ಸದಸ್ಯರ ಸಂಖ್ಯೆಯನ್ನೂ ವಿಸ್ತರಿಸುವ ಯೋಜನೆಗೆ ಸರ್ಕಾರ ಕೈಹಾಕಿದೆ. ಇವುಗಳ ಜೊತೆಗೆ 2026ರ ಗಡಿ ನಿರ್ಣಯ (ಡಿಲಿಮಿಟೇಶನ್) ಮಸೂದೆ, 2002ರ ಹಳೆಯ ಡಿಲಿಮಿಟೇಶನ್ ಕಾಯ್ದೆಯನ್ನು ರದ್ದುಗೊಳಿಸಿ ಅದರ ಬದಲಿಗೆ ಹೊಸ ವ್ಯವಸ್ಥೆಯನ್ನು ತರಲು ಉದ್ದೇಶಿಸಿದೆ.

ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಮಸೂದೆಯನ್ನು ಮಂಡಿಸಿದ್ದು, ಗದ್ದಲದ ನಡುವೆಯೇ ಸದನದಲ್ಲಿ ಚರ್ಚೆ ಆರಂಭವಾಯಿತು. ಸರ್ಕಾರದ ಪ್ರಕಾರ, ಈ ಮಸೂದೆ 2029ರ ಲೋಕಸಭೆ ಚುನಾವಣೆಗೆ ಮುನ್ನ ಮಹಿಳಾ ಮೀಸಲಾತಿ ಜಾರಿಗೆ ದಾರಿ ಮಾಡಿಕೊಡಲಿದೆ. ಜೊತೆಗೆ ಕ್ಷೇತ್ರ ಪುನರ್ವಿಂಗಡಣೆಯ ಮೂಲಕ ಹೊಸ ಸ್ಥಾನಗಳ ಹಂಚಿಕೆ ನಡೆಯಲಿದೆ.

ಇದನ್ನೂ ಓದಿ:

ಮಸೂದೆಯ ಪ್ರಕಾರ, ಹೊಸ ಲೋಕಸಭೆಯಲ್ಲಿ 815 ಸ್ಥಾನಗಳು ರಾಜ್ಯಗಳಿಗೆ ಮತ್ತು 35 ಸ್ಥಾನಗಳು ಕೇಂದ್ರಾಡಳಿತ ಪ್ರದೇಶಗಳಿಗೆ ಮೀಸಲಾಗಲಿವೆ. ಜೊತೆಗೆ ದೆಹಲಿ, ಜಮ್ಮು-ಕಾಶ್ಮೀರ ಮತ್ತು ಪುದುಚೇರಿ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 33 ಶೇಕಡಾ ಮೀಸಲಾತಿ ನೀಡುವ ವ್ಯವಸ್ಥೆಯೂ ಇರಲಿದೆ. ಇದರೊಂದಿಗೆ ಹೊಸ ಡಿಲಿಮಿಟೇಶನ್ ಆಯೋಗ ರಚನೆಗೂ ಅವಕಾಶ ಕಲ್ಪಿಸಲಾಗಿದ್ದು, ಇತ್ತೀಚಿನ ಲಭ್ಯ ಜನಗಣತಿ ಅಂಕಿಅಂಶಗಳ ಆಧಾರದ ಮೇಲೆ ಕ್ಷೇತ್ರಗಳ ಮರುಹಂಚಿಕೆ ನಡೆಯಲಿದೆ.

ಒಟ್ಟಾರೆ, ಮಹಿಳಾ ಸಬಲೀಕರಣದ ಹೆಸರಿನಲ್ಲಿ ತರಲಾಗಿರುವ ಈ ಮಸೂದೆಗಳು ದೇಶದ ಚುನಾವಣಾ ರಚನೆಯಲ್ಲಿ ದೊಡ್ಡ ಬದಲಾವಣೆ ತರಲಿದ್ದು, ಮುಂದಿನ ದಿನಗಳಲ್ಲಿ ಸಂಸತ್ತಿನಲ್ಲಿ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !